ಮಂಗಳೂರು : ಪಕ್ಷದಲ್ಲಿ ಕೈಗೊಳ್ಳಲಾದ ಕೆಲ ಕ್ರಮಗಳಿಗೂ ಚುನಾವಣಾ ಫಲಿತಾಂಶಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ವಿಚಾರಕ್ಕೆ ಪ್ರತಿಕ್ರಿಯಿಸಿ, “ಚುನಾವಣಾ ಫಲಿತಾಂಶ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನಾನು ಜ್ಯೋತಿಷಿ ಅಲ್ಲ,” ಎಂದು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಕ್ಷದ ಚೌಕಟ್ಟಿನೊಳಗೆ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಇಳಿಸುವ ವಿಚಾರ ಕೇವಲ ಊಹಾಪೋಹ ಮಾತ್ರ ಎಂದು ಅವರು ಹೇಳಿದರು. ಜಮೀರ್ ಅಹಮ್ಮದ್ ಪಕ್ಷದ ಹಿರಿಯ ನಾಯಕರು, ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ ಕೆಲವರು ಈ ವಿಷಯಕ್ಕೆ ಅನಾವಶ್ಯಕವಾಗಿ ಬಣ್ಣ ಹಚ್ಚಲು ಯತ್ನಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ತಂಡವನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ರಾಜಣ್ಣ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, “ಆ ಬಗ್ಗೆ ನನಗೆ ಮಾಹಿತಿ ಇಲ್ಲ, ಅದನ್ನು ರಾಜಣ್ಣ ಅವರನ್ನೇ ಕೇಳಬೇಕು,” ಎಂದು ಉತ್ತರಿಸಿದರು.
ಇದು ಸಂಪೂರ್ಣವಾಗಿ ಪಕ್ಷದ ಶಿಸ್ತಿನ ವಿಚಾರವಾಗಿದ್ದು, ಕಾಂಗ್ರೆಸ್ನಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ಪ್ರಶ್ನೆ ಇಲ್ಲ. ಎಲ್ಲ ಧರ್ಮದವರಿಗೂ ಸಮಾನ ಗೌರವ ನೀಡಲಾಗುತ್ತದೆ. ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

