ಮಂಗಳೂರು : ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮಾಡಿದ ಯಶಸ್ವಿ ಪ್ರಯತ್ನಕ್ಕೆ ಸೋಲಾಗಿದೆ ಇದು ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ ಎಂದು ದಕ್ಷಿಣ ಕನ್ನಡ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಡಾ|ಮಂಜುಳಾ ಅನಿಲ್ ರಾವ್ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ಕಿಡಿಕಾರಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾರಿ ಶಕ್ತಿ ವಂದನಾ’ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯ ಕರಾಳ ದಿನವಾಗಿದೆ ಎಂದರು.

ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ನ ಸಂಸ್ಕೃತಿಯಾಗಿದೆ ಎಂದರು.
ಸದ್ಯ ದೇಶದ ರಾಜಕೀಯ ಭೂಪಟದಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿರುವ ಕಾಂಗ್ರೆಸ್ ಪಕ್ಷವು ತನ್ನದೇ ಮನಸ್ಥಿತಿಯ ಇತರ ಪಕ್ಷಗಳನ್ನು ಕಟ್ಟಿಕೊಂಡು ‘ಇಂಡಿಯಾ’ ಕೂಟದ ಹೆಸರಿನಲ್ಲಿ ಶ್ರೀ ಕುಲದ ಹಕ್ಕನ್ನು ಲೋಕಸಭೆಯಲ್ಲಿ ಹಿಂಡಿದೆ. ದುಶ್ಯಾಸನ, ರಾವಣರ ಸಂಸ್ಕೃತಿ ನೆನಪಿಸುವ ರೀತಿಯಲ್ಲಿ ಸಂಸತ್ ನಲ್ಲಿ ನಡೆದುಕೊಂಡು ಡಾ. ಅಂಬೇಡ್ಕರ್ ಅವರ ಮಹದಾಶಯ, ಬಸವಣ್ಣ ಅವರು ಪ್ರತಿಪಾದಿಸಿದ ಲಿಂಗ ಸಮಾನತೆಯನ್ನು ಹತ್ತಿಕ್ಕಲು ಯತ್ನಿಸಿವೆ ಎಂದರು.

ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ನೀಡಿದ್ದರೆ ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಿತ್ತು. ಇದು ಕೇವಲ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಯತ್ನವಲ್ಲ ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ ಎಂದು ಬಿಂಬಿಸಬಹುದಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮಹಿಳಾ ವಿರೋಧಿ ಧೋರಣೆಯ ಕ್ರಮವನ್ನು ಕಟುವಾಗಿ ವಿರೋಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೊರ್ಚಾದ ಕಾರ್ಯದರ್ಶಿಗಳಾದ ಶ್ವೇತಾ ಪೂಜಾರಿ , ಉಪಾಧ್ಯಕ್ಷರಾದ ಪೂಜಾ ಪೈ, ಜಿಲ್ಲಾ ಮಹಿಳಾ ಮೊರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್ , ದಕ್ಷಿಣ ಮಂಡಲ ಮಹಿಳಾ ಮೊರ್ಚಾದ ಅಧ್ಯಕ್ಷರಾದ ಪೂರ್ಣಿಮಾ ರಾವ್ ಉಪಸ್ಥಿತರಿದ್ದರು.

