ರಾಯ್ಪುರ: ಛತ್ತೀಸ್ಗಢದ ಜಶ್ ಪುರ ಪ್ರದೇಶದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಿದ್ದು. ಈ ದುರ್ಘಟನೆಯಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ. ಈ ಅಪಘಾತ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ವಿಮಾನವು ಕೇವಲ 30 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಅದು ಮರಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದವು. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಬ್ಬರು ಪೈಲಟ್ಗಳ ಮೃತದೇಹಗಳನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ವೈದ್ಯಕೀಯ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದನ್ನು ಕಂಡುಹಿಡಿಯಲು ವಿಮಾನಯಾನ ಸಂಸ್ಥೆ ಮತ್ತು ನಾಗರಿಕ ವಿಮಾನಯಾನ ಇಲಾಖೆ ತನಿಖೆ ಆರಂಭಿಸಿದೆ. ತಜ್ಞರ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ, ವಿಮಾನದ ‘ಬ್ಲ್ಯಾಕ್ ಬಾಕ್ಸ್’ (ಫ್ಲೈಟ್ ಡೇಟಾ ರೆಕಾರ್ಡರ್) ಅನ್ನು ಪತ್ತೆ ಮಾಡುವ ಪ್ರಯತ್ನದಲ್ಲಿದ್ದಾರೆ. ತಾಂತ್ರಿಕ ದೋಷ, ಯಾಂತ್ರಿಕ ಸಮಸ್ಯೆ ಅಥವಾ ಪೈಲಟ್ ದೋಷ ಯಾವುದು ಅಪಘಾತಕ್ಕೆ ಕಾರಣ ಎಂದು ತನಿಖಾ ತಂಡ ಪರಿಶೀಲಿಸುತ್ತಿದೆ.

