ಬೆಂಗಳೂರು : 2025-26ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಬುಧವಾರ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದರು. ಈ ಬಾರಿ SSLC ಪರೀಕ್ಷೆಯಲ್ಲಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದಾಖಲೆಯ ಫಲಿತಾಂಶ ಬಂದಿದೆ ಎಂದು ಸಚಿವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ (ಶೇ 97.51) ಗಳಿಸಿವೆ. ಕಲಬುರಗಿ-85.06% ಕೊನೆಯ ಸ್ಥಾನ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ 96.18ರಷ್ಟು ಬಾಲಕಿಯರು, ಶೇ 91.94ರಷ್ಟು ಬಾಲಕರು ಪಾಸಾಗಿದ್ದಾರೆ. 3,92,922 ಬಾಲಕಿಯರ ಪೈಕಿ 3,77,922 ಬಾಲಕಿಯರು ತೇರ್ಗಡೆಯಾಗಿದ್ದಾರೆ. 3,77,287 ಬಾಲಕರ ಪೈಕಿ 3,46,872 ಬಾಲಕರು ತೇರ್ಗಡೆ ಹೊಂದಿದ್ದಾರೆ.
ಏಳು ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ಸುಖದೇವ್ 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ.

