ಬೆಂಗಳೂರು : ಪುತ್ತೂರು ಬಿಜೆಪಿ ಮಾಜಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಯುವತಿಗೆ ವಂಚಿಸಿದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಯುವತಿ ಹಾಗೂ ಮಗುವಿನ ಭವಿಷ್ಯಕ್ಕಾಗಿ ಮುಂದಿನ ಆದೇಶದವರೆಗೆ ಕೃಷ್ಣ ಜೆ. ರಾವ್ ಮಾಸಿಕ 75,000 ರೂ. ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ವಂಚಿಸಿದ್ದ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಮೇಲಿನ ಪ್ರಕರಣ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣ ರದ್ದು ಕೋರಿ ಕೃಷ್ಣ ಜೆ.ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಷರತ್ತಿನ ಮೇರೆಗೆ ಕೃಷ್ಣ ಜೆ.ರಾವ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.
ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಮಗುವಾಗಿದೆ. 10 ತಿಂಗಳ ಮಗು, ತಾಯಿಯನ್ನು ಅನಾಥವನ್ನಾಗಿಸುವುದು ಬೇಡ. ಹೀಗಾಗಿ ಮುಂದಿನ ಆದೇಶದವರೆಗೂ ಮಗು ಹಾಗೂ ತಾಯಿಗೆ ಮಾಸಿಕ 75 ಸಾವಿರ ರೂಪಾಯಿ ಪಾವತಿಸುವಂತೆ ಅರ್ಜಿದಾರ ಕೃಷ್ಣ ಜೆ. ರಾವ್ ಗೆ ಹೈಕೋರ್ಟ್ ಸೂಚನೆ ನೀಡಿದೆ.

