ಬೆಂಗಳೂರು :ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಅಹಿತಕರ ಘಟನೆಗೆ ಕಾರಣರಾದ ಮೂವರು ಪರೀಕ್ಷಾ ಮೇಲ್ವಿಚಾರಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮಡಿವಾಳದ ಕೃಪಾನಿಧಿ ಕಾಲೇಜು ಆಡಳಿತ ಮಂಡಳಿಯು ಸುಧಾಕರ್ ಡಿ., ಸರಿತಾ ಆರ್. ಮತ್ತು ಗಿರಿಜಮ್ಮ ಎಂಬುವರನ್ನು ಅಮಾನತುಗೊಳಿಸಿದೆ. ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ ಆರೋಪ ಇವರ ಮೇಲಿದೆ. ಮುಂದಿನ ಆದೇಶದವರೆಗೆ ಇವರು ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಮತ್ತು ಇಲಾಖಾ ವಿಚಾರಣೆಯನ್ನು ಎದುರಿಸಬೇಕೆಂದು ಸೂಚಿಸಲಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, “ಇದು ಅತ್ಯಂತ ದುರದೃಷ್ಟಕರ ಸಂಗತಿ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸೂಚಿಸಲಾಗಿದೆಯೇ ಹೊರತು, ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರಲು ಹೇಳಿಲ್ಲ. ಇದನ್ನು ನೋಡಿದರೆ ಇದೊಂದು ವಿಕೃತ ಮನಸ್ಸಿನವರ ಕೆಲಸದಂತೆ ಕಾಣುತ್ತಿದೆ,” ಎಂದು ಕಿಡಿಕಾರಿದ್ದಾರೆ.
“ಯಾರಾದರೂ ಇವರ ಹಿಂದೆ ನಿಂತು ಇಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಘಟನೆಯ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು,” ಎಂದು ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

