ಪೇಶಾವರ : ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಉಗ್ರ ಹಫೀಜ್ ಸಯೀದ್ನ ಆಪ್ತ ಸಹಚರ ಹಾಗೂ ಲಷ್ಕರ್-ಎ-ತೈಬಾ ಸಂಘಟನೆಯ ಹಿರಿಯ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಶೇಖ್ ಯೂಸುಫ್ ಅಫ್ರಿದಿ ಪ್ರಯಾಣಿಸುತ್ತಿದ್ದಾಗ ಅಪರಿಚಿತರು ಹೊಂಚು ಹಾಕಿ ದಾಳಿ ನಡೆಸಿದರು. ದಾಳಿಕೋರರು ಸತತವಾಗಿ ಗುಂಡಿನ ಮಳೆಗೈದಿದ್ದು, ಅಫ್ರಿದಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಫ್ರಿದಿಯ ಜೊತೆಗಿದ್ದವರ ಪೈಕಿ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಯಾರು ಈ ದಾಳಿ ನಡೆಸಿದ್ದಾರೆಂಬುದು ಇನ್ನೂ ತಿಳಿದುಬಂದಿಲ್ಲ.

ಹತ್ಯೆಗೀಡಾದ ಅಫ್ರಿದಿ, 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ಅತ್ಯಂತ ನಿಕಟವರ್ತಿಯಾಗಿದ್ದ. ಲಷ್ಕರ್ ಸಂಘಟನೆಯಲ್ಲಿ ಅವನ ಪಾತ್ರ ನಿರ್ಣಾಯಕವಾಗಿತ್ತು. ಈತ ಲಷ್ಕರ್ ಸಂಘಟನೆಯ ಹಣಕಾಸು ವಹಿವಾಟುಗಳನ್ನು ನಿರ್ವಹಿಸುತ್ತಿದ್ದ. ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಯುರೋಪ್ನಿಂದ ಸಂಗ್ರಹಿಸಿದ ಹಣವನ್ನು ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಬಳಸುತ್ತಿದ್ದ. ಮತ್ತು ಯುವಕರನ್ನು ಸಂಘಟನೆಗೆ ಸೇರ್ಪಡೆಗೊಳಿಸುವ ಪ್ರಮುಖ ಕಾರ್ಯಕರ್ತನಾಗಿದ್ದ.

