ಮಂಗಳೂರು : 2022ರಲ್ಲಿ ಕರಾವಳಿ ನಗರಿ ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2022ರ ನವೆಂಬರ್ 19ರಂದು ನಡೆದ ಸ್ಫೋಟದಲ್ಲಿ ಶಾರಿಕ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

2022ರ ನವೆಂಬರ್ 19 ರಂದು ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣದ ಸಮೀಪವಿರುವ ನಾಗುರಿ ಎಂಬಲ್ಲಿ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಭಾರಿ ಸದ್ದು ಕೇಳಿಬಂತು. ಅದು ಸಾಮಾನ್ಯ ಸ್ಫೋಟವಾಗಿರಲಿಲ್ಲ, ಅದೊಂದು ವ್ಯವಸ್ಥಿತವಾಗಿ ರೂಪಿಸಲಾಗಿದ್ದ ಐಇಡಿ ಬಾಂಬ್ ಸ್ಫೋಟ. ಈ ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ಅದೊಂದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಆರೋಪಿ ರೂಪಿಸಿದ್ದ ಭಾರಿ ದೊಡ್ಡ ಅನಾಹುತವೊಂದು ತಪ್ಪಿತ್ತು, ಈ ಪ್ರಕರಣ ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿತ್ತು.

ಪೊಲೀಸರು ತನಿಖೆ ಆರಂಭಿಸಿದಾಗ ಆಟೋದಲ್ಲಿ ಸುಟ್ಟುಹೋಗಿದ್ದ ಪ್ರೆಶರ್ ಕುಕ್ಕರ್ ಪತ್ತೆಯಾಯಿತು. ಅದರೊಳಗೆ ಡಿಟೋನೇಟರ್, ಸರ್ಕ್ಯೂಟ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆತ್ಮಾಹುತಿ ಬಾಂಬ್ ಇದ್ದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಶಾರಿಕ್ ತನ್ನ ಬಳಿ ಹುಬ್ಬಳ್ಳಿಯ ‘ಪ್ರೇಮರಾಜ್’ ಎಂಬುವವರ ಹೆಸರಿನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದನು, ಶಾರಿಕ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಳವಡಿಸಿದ್ದನು ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.

ಪ್ರಕರಣದ ಗಾಂಭೀರ್ಯ ಅರಿತ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿತು. ಶಾರಿಕ್ ಕೇವಲ ಒಬ್ಬ ಅಪರಾಧಿಯಲ್ಲ, ಆತ ಐಸಿಸ್ (ISIS) ಉಗ್ರ ಸಂಘಟನೆಯಿಂದ ಪ್ರೇರಿತನಾಗಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ “ಲೋನ್ ವುಲ್ಫ್” ಎಂಬುದು ಬಯಲಾಯಿತು. ಮಂಗಳೂರಿನ ಕದ್ರಿ ದೇವಸ್ಥಾನ ಅಥವಾ ಜನನಿಬಿಡ ಪ್ರದೇಶವೇ ಆತನ ಗುರಿಯಾಗಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯವು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯನ್ನು ಪೂರ್ಣಗೊಳಿಸಿ ಇಂದು ಅಂತಿಮ ತೀರ್ಪು ನೀಡಿದೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್ ಮುಂದೆ ಹೇಳಿದ್ದಾನೆ. ಹೀಗಾಗಿ ಎ2 ಸೈಯದ್ ವಿರುದ್ಧ ಸಾಕ್ಷ್ಯ ವಿಚಾರಣೆ ಮುಂದುವರಿಯಲಿದೆ. ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.

