ಬೆಂಗಳೂರು : ರಾಜಧಾನಿಯಲ್ಲಿ ಅಬ್ಬರಿಸಿದ ಬಿರುಗಾಳಿ ಸಹಿತ ಭಾರಿ ಮಳೆ ಇಂದು ಮಹಾ ದುರಂತವನ್ನೇ ಸೃಷ್ಟಿಸಿದೆ. ನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಬೌರಿಂಗ್ ಆಸ್ಪತ್ರೆಯ ಹೊರಗಿನ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಬೀದಿಬದಿಯ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು. ಸಂಜೆ ಸುರಿದ ಭಾರಿ ಬಿರುಗಾಳಿ ಮಳೆಗೆ ಹಳೆಯದಾಗಿದ್ದ ಈ ಕಾಂಪೌಂಡ್ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗೋಡೆಯ ಕೆಳಗೆ ಸಿಲುಕಿದ ವ್ಯಾಪಾರಿಗಳು ಮತ್ತು ಅಲ್ಲಿ ನಿಂತಿದ್ದ ಸಾರ್ವಜನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಸೇರಿರುವುದು ಘಟನೆಯ ತೀವ್ರತೆಯನ್ನು ಹೆಚ್ಚಿಸಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು 5ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

