ಉತ್ತರ ಪ್ರದೇಶ : ಉತ್ತರಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಾಮಕರಣ ಸಮಾರಂಭದ ಸಮಯದಲ್ಲಿ ಮದ್ಯ ಸೇವಿಸಲು ನೀರು ತರಲು ನಿರಾಕರಿಸಿದ ಕಾರಣ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕಾಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್ಗಂಜ್ ಗ್ರಾಮದಲ್ಲಿ ಕಳೆದ ಶುಕ್ರವಾರದಂದು ನಾಮಕರಣ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಮತ್ತು ಗ್ರಾಮಸ್ಥರು ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಬಾಲಕನ ತಂದೆಯ ಸಂಬಂಧಿಯಾದ ಧನೇಶ್ ಯಾದವ್ ಎಂಬಾತ ಮದ್ಯ ಸೇವಿಸುತ್ತಾ ಕುಳಿತಿದ್ದ. ಮದ್ಯದ ಅಮಲಿನಲ್ಲಿದ್ದ ಧನೇಶ್, ಮದ್ಯಕ್ಕೆ ಬೆರೆಸಲು ನೀರು ತರುವಂತೆ ಅಲ್ಲಿಯೇ ಇದ್ದ ಒಂಬತ್ತು ವರ್ಷದ ಬಾಲಕನಿಗೆ ಹೇಳಿದ್ದಾನೆ. ಆದರೆ ಬಾಲಕ ನೀರು ತರಲು ನಿರಾಕರಿಸಿದಾಗ, ಕೋಪಗೊಂಡ ಧನೇಶ್ ತನ್ನ ಬಳಿಯಿದ್ದ ಬಂದೂಕಿನಿಂದ ಮಗುವಿನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಕಾಸ್ಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಲಿಗಢಕ್ಕೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬಾಲಕ ಸಾವನ್ನಪ್ಪಿದ್ದಾನೆ
ಘಟನೆ ನಡೆದ ತಕ್ಷಣ ಆರೋಪಿ ಧನೇಶ್ ಸ್ಥಳದಿಂದ ಪರಾರಿಯಾಗಿದ್ದ, ಸಂತ್ರಸ್ತ ಕುಟುಂಬದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಖಿತೌಲಿ ಕಾಲುವೆ ಸೇತುವೆಯ ಬಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

