ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಅಪಾಯದ ಅಂಚಿನಲ್ಲಿದ್ದ ಭಾರತೀಯ ಮೂಲದ ಹಡಗಿನ ಸಿಬ್ಬಂದಿಗೆ ಪಾಕಿಸ್ತಾನ ನೌಕಾಪಡೆ ಮಾನವೀಯ ನೆರವು ನೀಡಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಗಳ ನಡುವೆಯೂ ಸಾಗರದ ಮಧ್ಯೆ ನಡೆದ ಈ ಘಟನೆ ‘ಮಾನವೀಯತೆ ಎಲ್ಲಕ್ಕಿಂತ ದೊಡ್ಡದು’ ಎಂಬ ಸಂದೇಶ ಸಾರಿದೆ.
ಒಮಾನ್ನಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ‘ಎಂವಿ ಗೌತಮ್’ ಎಂಬ ಹಡಗು ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ತಾಂತ್ರಿಕ ದೋಷಕ್ಕೆ ತುತ್ತಾಯಿತು. ಈ ಹಡಗಿನಲ್ಲಿ ಆರು ಮಂದಿ ಭಾರತೀಯರು ಮತ್ತು ಒಬ್ಬ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಒಟ್ಟು ಏಳು ಜನ ಸಿಬ್ಬಂದಿ ಇದ್ದರು. ಹಡಗು ಅರ್ಧದಲ್ಲೇ ಸ್ಥಗಿತಗೊಂಡಾಗ ಆತಂಕಕ್ಕೊಳಗಾದ ಸಿಬ್ಬಂದಿ ನೆರವಿಗಾಗಿ ಮೊರೆ ಇಟ್ಟಿದ್ದರು.
ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ತಕ್ಷಣವೇ ಪಾಕಿಸ್ತಾನಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ (PMSA), ತನ್ನ ನೌಕೆಯನ್ನು ಕಳುಹಿಸಿ ಸಂಕಷ್ಟದಲ್ಲಿದ್ದವರಿಗೆ ಆಹಾರ, ವೈದ್ಯಕೀಯ ನೆರವು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಿದೆ.

