ಕಾಸರಗೋಡು : ಸಪ್ತ ಭಾಷಾ ಸಂಗಮ ನೆಲೆ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಉಬ್ರಂಗಳ ಗ್ರಾಮದಲ್ಲಿ ನೆಲೆಯಾದ 2000 ವರ್ಷಗಳ ಇತಿಹಾಸವಿರುವ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರವು ‘ಬಡಗು ಶಬರಿಮಲೆ’ಯೆಂದೇ ಇತಿಹಾಸ ಪ್ರಸಿದ್ಧವಾಗಿದೆ. ಶ್ರೀ ಕ್ಷೇತ್ರದಲ್ಲಿ ಮೇ 11ರಂದು 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಸಂಜೆ ಗಂಟೆ 5 ರಿಂದ ನಡೆಯಲಿದೆ ಎಂದು ಶ್ರೀಕ್ಷೇತ್ರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಕುಣಿಕುಳ್ಳಾಯ ತಿಳಿಸಿದರು
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಮಹತ್ ಕಾರ್ಯದಲ್ಲಿ ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಈ ಪುಣ್ಯಕಾರ್ಯದ ಉದ್ಘಾಟನೆಗೈದು ಆಶೀರ್ವಚನ ನೀಡಲಿರುವರು .ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಪ್ರಮುಖರಾದ ಮಧುಸೂದನ ಆಯರ್ ಮಂಗಳೂರು , ಪ್ರಶಾಂತ್ ಕುಣಿಕುಳ್ಳಾಯ, ಉಬ್ರಂಗಳ , ರಾಜೇಶ್ ಮಾಸ್ಟರ್ ಅಗಲ್ಪಾಡಿ , ಗೋವಿಂದರಾಜ್ ಮೈಲ್ತೊಟ್ಟಿ ಉಪಸ್ಥಿತರಿದ್ದರು .

