ಮಂಗಳೂರು : ಮಕ್ಕಳ ಪ್ರತಿಭೆ, ಸೃಜನಶೀಲತೆ ಹಾಗೂ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ಸ್ಪಾರ್ಕ್ ಟ್ರೀ’ ವತಿಯಿಂದ ಮೇ 16 ಮತ್ತು 17ರಂದು ನಗರದ ಪಾಲೇಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ ‘ಕಿಡ್ಫೆಸ್ಟ್ 2026’ ಎಂಬ ವಿಶೇಷ ಮಕ್ಕಳ ಉತ್ಸವ ಆಯೋಜಿಸಲಾಗಿದೆ ಎಂದು ಸ್ಪಾರ್ಕ್ ಟ್ರೀ ತಂಡದ ಪ್ರಮುಖರಾದ ಸೌಜನ್ಯ ಹೆಗ್ಡೆ ತಿಳಿಸಿದ್ದಾರೆ
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಒದಗಿಸುವ ಆಶಯದೊಂದಿಗೆ ಈ ಉತ್ಸವವನ್ನು ರೂಪಿಸಲಾಗಿದೆ ಎಂದರು.

ಉತ್ಸವದಲ್ಲಿ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ, ಮಕ್ಕಳಿಗೆ ಕಲಿಕೆ, ಆಟೋಟ, ಸೃಜನಾತ್ಮಕ ಚಟುವಟಿಕೆಗಳು ಹಾಗೂ ವಿವಿಧ ಕಾರ್ಯಾಗಾರಗಳನ್ನು ಒಳಗೊಂಡ ಸಮಗ್ರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮೊದಲ ಬಾರಿಗೆ ಮಕ್ಕಳಿಗಾಗಿ ‘ಕಿಡ್ಸ್ ಮ್ಯಾರಥಾನ್’ ಹಮ್ಮಿಕೊಳ್ಳಲಾಗುತ್ತಿದೆ. ಇದು ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ, ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರೀತಮ್ ಪೊನ್ನಪ್ಪ ಉಪಸ್ಥಿತರಿದ್ದರು.

