ಸಹರಾನ್ಪುರ : ಉತ್ತರ ಪ್ರದೇಶದ ಆಸ್ಪತ್ರೆಯ ವೈದ್ಯರೊಬ್ಬರು ಸಹರಾನ್ಪುರದ ನನೌಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಕೆಲವೇ ಕ್ಷಣಗಳಲ್ಲಿ ಉಸಿರಾಟ ನಿಲ್ಲಿಸಿದ ನವಜಾತ ಶಿಶುವನ್ನು ಉಳಿಸಲು ಸಿಪಿಆರ್ ಮತ್ತು ತುರ್ತು ಚಿಕಿತ್ಸೆಯನ್ನು ನೀಡುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ನಂತರ ಆನ್ಲೈನ್ನಲ್ಲಿ ಪ್ರಶಂಸಿಸಲಾಗುತ್ತಿದೆ.
ಉತ್ತರ ಪ್ರದೇಶದ ಸಹಾರನ್ಪುರದ ನಾನೋಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪವಾಡವೊಂದು ನಡೆದಿದೆ. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಉಸಿರಾಟ ನಿಲ್ಲಿಸಿ ಸಾವಿನ ಅಂಚಿನಲ್ಲಿದ್ದ ನವಜಾತ ಶಿಶುವಿಗೆ ವೈದ್ಯೆಯೊಬ್ಬರು ತಮ್ಮ ಉಸಿರನ್ನೇ ನೀಡಿ ಮರುಜೀವ ಕೊಟ್ಟಿದ್ದಾರೆ. ನಾನೋಟಾ ಕೇಂದ್ರದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ತಕ್ಷಣ ಮಗು ಉಸಿರಾಡುತ್ತಿರಲಿಲ್ಲ.
ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ಯಂತ್ರ ಕೆಲಸ ಮಾಡದಿದ್ದಾಗ ಅಲ್ಲಿನ ವಾತಾವರಣದಲ್ಲಿ ಗಾಬರಿ ಮತ್ತು ನಿಶ್ಯಬ್ದ ಆವರಿಸಿತು. ಇಂತಹ ಕ್ಲಿಷ್ಟ ಸಮಯದಲ್ಲಿ ಡಾ. ರುಮಾ ಅವರು ಧೃತಿಗೆಡದೆ ತಕ್ಷಣ ಕಾರ್ಯಪ್ರವೃತ್ತರಾದರು.ಯಂತ್ರ ವೈಫಲ್ಯವಾದಾಗ ಡಾ. ರುಮಾ ಅವರು ಪ್ರೊಟೊಕಾಲ್ಗಳಿಗಿಂತ ಮಾನವೀಯತೆಗೆ ಒತ್ತು ನೀಡಿದರು.ಮಗುವಿನ ಎದೆಯ ಮೇಲೆ ಒತ್ತಡ ಹಾಕುತ್ತಾ ಸ್ವತಃ ತಮ್ಮ ಬಾಯಿಯಿಂದ ಮಗುವಿಗೆ ಕೃತಕ ಉಸಿರಾಟ ನೀಡಲು ಆರಂಭಿಸಿದರು. ಸತತ ಪ್ರಯತ್ನದ ನಂತರ ಮಗು ಅಳಲು ಆರಂಭಿಸಿತು.ಆ ಒಂದು ಅಳುವಿನ ಶಬ್ದ ಇಡೀ ಕೊಠಡಿಯಲ್ಲಿದ್ದವರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು. ವೈದ್ಯಕೀಯ ತರಬೇತಿಗಿಂತ ಮಿಗಿಲಾಗಿ ವೈದ್ಯೆಯಲ್ಲಿದ್ದ ತಾಯ್ತನದ ತುಡಿತ ಒಂದು ಜೀವವನ್ನು ಉಳಿಸಿದೆ. ಇಂದು ಡಾ. ರುಮಾ ಅವರ ಈ ಧೀರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

