ನವದೆಹಲಿ: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ಕೇಂದ್ರ ತನಿಖಾ ದಳ ತನಿಖೆಯ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರವಾಗಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ಪಿ.ವಿ. ಕುಲಕರ್ಣಿ ಈ ಪ್ರಕರಣದ ಪ್ರಮುಖ ಪಾತ್ರಧಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತನಿಖಾಧಿಕಾರಿಗಳ ಪ್ರಾಥಮಿಕ ವರದಿಗಳ ಪ್ರಕಾರ, ಕುಲಕರ್ಣಿ ಅವರಿಗೆ ಪರೀಕ್ಷಾ ವ್ಯವಸ್ಥೆಯ ಕೆಲವು ಹಂತಗಳಲ್ಲಿ ನೇರವಾಗಿ ಪ್ರವೇಶವಿದ್ದುದಾಗಿ ತಿಳಿದುಬಂದಿದೆ. ಈ ಪ್ರವೇಶವನ್ನು ದುರುಪಯೋಗಪಡಿಸಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇರಬಹುದು ಎಂದು CBI ಪರಿಶೀಲಿಸುತ್ತಿದೆ
ಮಾಹಿತಿಯ ಪ್ರಕಾರ, 2026ರ ಏಪ್ರಿಲ್ ಕೊನೆಯ ವಾರದಲ್ಲೇ ಕುಲಕರ್ಣಿ ಈ ಅಕ್ರಮದ ಬಗ್ಗೆ ಯೋಜನೆ ರೂಪಿಸಿದ್ದರೆಂದು ಶಂಕಿಸಲಾಗಿದೆ. ಈ ಕಾರ್ಯದಲ್ಲಿ ಈಗಾಗಲೇ ಬಂಧಿತಳಾಗಿರುವ ಮನಿಷಾ ವಾಘಾರೆ ಅವರ ಸಹಕಾರವೂ ಇರಬಹುದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ..
ಪುಣೆಯಲ್ಲಿ ತಮ್ಮ ನಿವಾಸದಲ್ಲಿ ಅವರು ಆಯ್ದ ಕೆಲ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರೆಂಬ ಮಾಹಿತಿ ಹೊರಬಂದಿದೆ. ಈ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಆಯ್ಕೆಗಳು ಹಾಗೂ ಸರಿಯಾದ ಉತ್ತರಗಳನ್ನು ಬರೆಸಲಾಗುತ್ತಿತ್ತು ಎಂಬ ಆರೋಪವಿದೆ. ಬಳಿಕ ಮೇ 3ರಂದು ನಡೆದ ಅಧಿಕೃತ NEET ಪರೀಕ್ಷೆಯ ಪ್ರಶ್ನೆಗಳಿಗೂ ಹಾಗೂ ಈ ತರಗತಿಗಳಲ್ಲಿ ನೀಡಲಾದ ವಿಷಯಕ್ಕೂ ಅಚ್ಚರಿಯ ಮಟ್ಟದ ಸಾಮ್ಯತೆ ಕಂಡುಬಂದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಪ್ರಕರಣದ ಸಂಬಂಧ CBI ಇದುವರೆಗೆ ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹಿಲ್ಯನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಟ್ಟು 7 ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಕೆಲವರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇತ್ತೀಚೆಗೆ ಬಂಧಿಸಲಾದ ಇಬ್ಬರು ಆರೋಪಿಗಳನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆದು ದೆಹಲಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

