ವಿಟ್ಲ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಎರಡು ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ನಡೆದಿದೆ.ಜಾನುವಾರು ಸಾಗಾಟ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಕಾರು ಚಾಲಕ ವಾಹನವನ್ನು ಪೊಲೀಸರ ಮೇಲೆ ಹತ್ತಿಸಲು ಪ್ರಯತ್ನಿಸಿದ ಘಟನೆಯೂ ನಡೆಯಿತು.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕ ಬಂಟ್ವಾಳ ತಾಲೂಕು ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಪ್ ಹಾಗೂ ಕಾರು ಚಾಲಕ ಬಶೀರ್ ಎಂಬವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನವೊಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಮೇ.21ರಂದು ವಿಟ್ಲ ಪೊಲೀಸ್ ಠಾಣಾ ಎಸ್.ಐ. ರಾಮಕೃಷ್ಣ ರವರಿಗೆ ಖಚಿತ ಮಾಹಿತಿ ಲಭಿಸಿದ್ದು, ಅದರಂತೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಆ ದಾರಿಯಾಗಿ ಬಂದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಎರಡು ಜಾನುವಾರುಗಳು ಪತ್ತೆಯಾಗಿತ್ತು.

ಈ ಸಂದರ್ಭದಲ್ಲಿ ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಸ್ವಿಪ್ಟ್ ಕಾರಿನ ಚಾಲಕ ಬಶೀರ್ ಎಂಬಾತ ಸ್ಥಳದಲ್ಲಿ ಪಿಕಪ್ ವಾಹನ ಚಾಲಕನನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಸ್ವಿಫ್ಟ್ ಕಾರನ್ನು ಹತ್ತಿಸಲು ಪ್ರಯತ್ನಿಸಿ ಪರಾರಿಯಾಗಿದ್ದ. ಬಳಿಕ ಜಾನುವಾರು ಸಾಗಿಸುತ್ತಿದ್ದ ಪಿಕಪ್ ಚಾಲಕನನ್ನು ಮತ್ತಷ್ಟು ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಜಾನುವಾರು ಸಹಿತ ವಾಹನವನ್ಜು ವಶಕ್ಕೆ ಪಡೆದಿರುವ ಪೊಲೀಸರು ಪಿಕಪ್ ಚಾಲಕ ಹಾಗೂ ಸ್ವಿಫ್ಟ್ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

