ಮಂಗಳೂರು, ಸೆ.11: ಯಶವಂತಪುರ–ಮಂಗಳೂರು ಜಂಕ್ಷನ್ ನಡುವಿನ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ರೈಲು ಸಂಚಾರ ಪೂರ್ಣಗೊಂಡಿರುವುದು ವಿಶೇಷವಾಗಿದೆ.
ಎರಡನೇ ಪ್ರಾಯೋಗಿಕ ಸಂಚಾರದಲ್ಲಿ ರೈಲ್ವೆಯ ವಿದ್ಯುತ್ (TRD ಮತ್ತು TRO), ಮೆಕ್ಯಾನಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ರೈಲಿನ ಸಂಚಾರ ಸಮಯ, ತಾಂತ್ರಿಕ ಕಾರ್ಯಾಚರಣೆ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು.
ಮೊದಲ ಪ್ರಾಯೋಗಿಕ ಸಂಚಾರದ ವೇಳೆ ಘಾಟ್ ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಓವರ್ಹೆಡ್ ಉಪಕರಣ ಹಾಗೂ ರೈಲಿನ ಪ್ಯಾಂಟೋಗ್ರಾಫ್ ನಡುವಿನ ಹೊಂದಾಣಿಕೆಗೆ ಸಮಸ್ಯೆ ಉಂಟಾಗಿ ಸಂಚಾರದಲ್ಲಿ ವಿಳಂಬವಾಗಿತ್ತು. ಆದರೆ ಎರಡನೇ ಸಂಚಾರ ಯಶಸ್ವಿಯಾಗಿ ನಡೆದಿರುವುದು ರೈಲ್ವೆ ಅಧಿಕಾರಿಗಳಿಗೆ ವಿಶ್ವಾಸ ಮೂಡಿಸಿದೆ.
ಆದಾಗ್ಯೂ, ಉಳಿದಿರುವ ಕೆಲವು ತಾಂತ್ರಿಕ ಅಂಶಗಳನ್ನು ಪರಿಶೀಲಿಸುವ ಅಗತ್ಯವಿದ್ದಲ್ಲಿ ಮತ್ತೊಂದು ಪ್ರಾಯೋಗಿಕ ಸಂಚಾರ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರೈಲಿನ ಸುರಕ್ಷಿತ ಹಾಗೂ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಂಡ ಬಳಿಕ ಅಂತಿಮ ವೇಳಾಪಟ್ಟಿ ಮತ್ತು ಸೇವೆಯ ಆರಂಭದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಇದರ ನಡುವೆ ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಕಬಕ–ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆಗೆ ಅವಕಾಶ ನೀಡಿರುವುದನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಬಕ–ಪುತ್ತೂರು ನಿಲುಗಡೆಯನ್ನು ಶಾಶ್ವತಗೊಳಿಸುವುದರ ಜೊತೆಗೆ ರೈಲಿನ ವೇಳಾಪಟ್ಟಿಯಲ್ಲಿಯೂ ಅಗತ್ಯ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು–ಮಂಗಳೂರು ನಡುವೆ ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕಕ್ಕಾಗಿ ಕಾಯುತ್ತಿರುವ ಕರಾವಳಿ ಭಾಗದ ಪ್ರಯಾಣಿಕರಿಗೆ ವಂದೇ ಭಾರತ್ ಸೇವೆ ಮಹತ್ವದ್ದಾಗಿದ್ದು, ಪ್ರಾಯೋಗಿಕ ಸಂಚಾರಗಳು ಪೂರ್ಣಗೊಂಡ ಬಳಿಕ ಅಂತಿಮ ವೇಳಾಪಟ್ಟಿ ಹಾಗೂ ನಿಲುಗಡೆಗಳ ಕುರಿತು ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.

