ಕಾಸರಗೋಡು: ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ಆಶ್ರಯದಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಾಗಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಸೇವಾ ಸಂಕಲ್ಪ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಸಾರ್ವಜನಿಕ ಸೇವೆಯ ಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ 12 ವಿಧದ ಸೇವಾ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಗಳನ್ನು ಮಂಡಲ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಮಾರ್ಗದರ್ಶನ ಹಾಗೂ ತರಬೇತಿಯನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ಬಿಜೆಪಿ ಜಿಲ್ಲಾ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುಡ್ರೆಪ್ಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ, ದಿವ್ಯ ಸಂದೀಪ್ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯಕ್ ಮಾತನಾಡಿದರು.

