ಧಾರವಾಡ :ಹಿರಿಯ ಸಂಶೋಧಕ ಡಾ.ಜೆ.ಎಂ.ನಾಗಯ್ಯ ದೊಡ್ಡಾಟದ ಶೈಲಿಯಲ್ಲಿ ಬರೆದ ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ ‘ಸಂಣನಾಕ’ ಐತಿಹಾಸಿಕ ಕಿರುನಾಟಕ ರಚನೆಯು ಸೃಜನಶೀಲ ಸಾಹಿತ್ಯ ಕೃಷಿಯ ಹೊಸ ಪ್ರಯತ್ನವಾಗಿ ಗಮನಸೆಳೆಯುತ್ತದೆ ಎಂದು ಹಿರಿಯ ಸಾಹಿತಿ ಡಾ.ಶಾಂತಿನಾಥ ದಿಬ್ಬದ ಹೇಳಿದರು.

ಅವರು ಕವಿವಿಯ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಧಾರವಾಡ ಕಟ್ಟೆ ಹಾಗೂ ಹುಬ್ಬಳ್ಳಿಯ ಡಾ. ಜೆ.ಎಂ.ನಾಗಯ್ಯ ಟ್ರಸ್ಟ್ ಜೊತೆಗೂಡಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶನಿವಾರ ಡಾ.ಜೆ.ಎಂ.ನಾಗಯ್ಯ ಬರೆದ ‘ಸಂಣನಾಕ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಬೆಳಗಾವಿ ಜಿಲ್ಲೆ ಬೇಡಕಿಹಾಳ ಗ್ರಾಮದ ತಾಮ್ರಶಾಸನದ ವಿಷಯವಸ್ತು ಆಧರಿಸಿದ ಈ ಕೃತಿಯಲ್ಲಿ ಬರಗಾಲದ ಅಯೋಮಯ ಪರಿಸ್ಥಿತಿಯ ಹಸಿವು ಹಿಂಗಿಸಿಕೊಳ್ಳುವ ನಿಟ್ಟಿನಲ್ಲಿ ನಡೆದ ಒಂದು ಕೊಲೆಗೆ ಪ್ರತಿಯಾಗಿ ಬೇಡರ ಸಮಾಜದ ಹಲವು ಜನರನ್ನು ಸಾಮೂಹಿಕವಾಗಿ ಹತ್ಯೆಗೈದ ದಾರುಣ ಘಟನೆಯನ್ನು ಕೇಂದ್ರೀಕರಿಸಿ ನಾಟಕದ ಪಾತ್ರಗಳು ಚಿತ್ರಿತವಾಗಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರ ಮಾತನಾಡಿ, ಇತಿಹಾಸದ ಅವಶೇಷಗಳಲ್ಲಿ ಸತ್ಯವನ್ನು ಸಂಶೋಧಿಸುತ್ತಿದ್ದ ಡಾ.ಜೆ.ಎಂ.ನಾಗಯ್ಯ ಅವರ ಚಿತ್ತ ಇದೀಗ ಸೃಜನಶೀಲ ಸಾಹಿತ್ಯ ಕೃಷಿಯ ಭಾಗವಾಗಿ ನಾಟಕ ಪರಂಪರೆಯತ್ತ ತಿರುಗಿರುವುದು ಖುಷಿ ತಂದಿದೆ. ಕನ್ನಡದಲ್ಲಿ ಡಾ.ಗಿರೀಶ ಕಾರ್ನಾಡ, ಡಾ. ಚಂದ್ರಶೇಖರ ಕಂಬಾರ, ಪಿ.ಲಂಕೇಶ ಸೇರಿದಂತೆ ಅನೇಕರು ನಾಟಕ ಪರಂಪರೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಒಟ್ಟು 6 ದೃಶ್ಯಗಳಲ್ಲಿ 16 ಪಾತ್ರಗಳ ಮೂಲಕ ‘ಸಂಣನಾಕ’ ನಾಟಕದ ವಿಷಯವಸ್ತು ಹಂಚಿಕೆಯಾಗಿದ್ದು, ಇಲ್ಲಿ ಶೆಕ್ಸ್ಪಿಯರ್ ನಾಟಕಗಳ ವಿಷಯವಸ್ತು ನೆನಪಿಗೆ ಬರುತ್ತದೆ ಎಂದರು.
ಕೃತಿ ಪರಿಚಯ ಮಾಡಿದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ನಾಟಕದುದ್ದಕ್ಕೂ ಉತ್ತರ ಕರ್ನಾಟಕದ ಪಕ್ಕಾ ದೇಶಿ ಜವಾರಿ ಭಾಷೆಯ ಸೊಗಡು ಎದ್ದುಕಾಣುತ್ತಿದ್ದು, ಹಿಂಸೆಯನ್ನು ಒಪ್ಪದ ಭಾವ ಇಲ್ಲಿ ಕೇಂದ್ರೀತವಾಗಿದೆ ಎಂದರು.
ಕವಿವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣ ನಾಯಕ ಅಧ್ಯಕ್ಷತೆವಹಿಸಿದ್ದರು. ಹಿರಿಯ ಲೇಖಕರುಗಳಾದ ಬಳ್ಳಾರಿಯ ಡಾ.ಸಿ.ಎಂ.ವೀರಭದ್ರಯ್ಯ, ಡಾ.ಧನವಂತ ಹಾಜವಗೋಳ, ಡಾ.ಕೆ. ಮಲ್ಲಿಕಾರ್ಜುನ, ಡಾ.ಎನ್.ವೈ.ಮಟ್ಟಿಹಾಳ, ಡಾ.ಪೊಲೀಸ್ಪಾಟೀಲ, ಡಾ.ರಾಜೇಶ್ವರಿ ಸಾಲಿ, ಎಸ್.ಎಂ. ನಾಗಭೂಷಣ, ಎಸ್.ಬಿ. ಹಿರೇಮಠ, ಜೆ.ಎಂ. ವಿಕ್ರಮಾದಿತ್ಯ, ಗುರುಮೂರ್ತಿ ಯರಗಂಬಳಿಮಠ, ಜೆಎಂ. ವಿಜಯಾದಿತ್ಯ, ಕು.ಲಿಪಿ ಇತರರು ಇದ್ದರು. ಡಾ.ಮಲ್ಲಪ್ಪ ಬಂಡಿ ಸ್ವಾಗತಿಸಿದರು. ಸುಷ್ಮಾ ಹೊಳೆಯಣ್ಣವರ ಹಾಗೂ ಮಮತಾಜಬೇಗಂ ನಿರೂಪಿಸಿದರು. ಮಂಜುನಾಥ ಬಗಲಿ ವಂದಿಸಿದರು.

