ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಧಾನ ಕಾರ್ಯದರ್ಶಿ, ಉದ್ಯಮಿ, ಸಹಕಾರಿ ಕ್ಷೇತ್ರದ ತಜ್ಞ ಹಾಗೂ ನ್ಯಾಯವಾದಿ ಶ್ರೀಧರ ಪಿ.ಎಸ್ ಅವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ದೂರಶಿಕ್ಷಣ ಯೋಜನೆಯಡಿ ನಡೆದ ‘ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್’ ಕೋರ್ಸ್ನಲ್ಲಿ ‘ಎ’ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಡಿಪ್ಲೋಮಾ ಪದವೀಧರರಾಗಿದ್ದಾರೆ.
ಉಡುಪಿ ಜಿಲ್ಲೆಯ ಸಾಸ್ತಾನ ಮೂಲದ ಶ್ರೀಧರ ಪಿ.ಎಸ್ ಅವರು ಕಾನೂನು ಪದವೀಧರರಾಗಿದ್ದು, ನ್ಯಾಯವಾದಿಯಾಗಿ ವೃತ್ತಿ ನಿರ್ವಹಿಸುವುದರ ಜೊತೆಗೆ ಸಹಕಾರಿ ಕ್ಷೇತ್ರದಲ್ಲೂ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ ಸಹಕಾರಿ ಸಂಘಗಳು, ಸೊಸೈಟಿಗಳು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿರುವ ಅವರು, ಕರ್ನಾಟಕ ರಾಜ್ಯದಾದ್ಯಂತ ಸಹಕಾರಿ ಸಂಘಟನಾ ಕ್ಷೇತ್ರದಲ್ಲಿ ವಿದ್ವತ್ ಭಾಷಣಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಸಾಸ್ತಾನದಿಂದ ತಮ್ಮ ಸಾಮಾಜಿಕ ಹಾಗೂ ವೃತ್ತಿಜೀವನವನ್ನು ಆರಂಭಿಸಿದ ಅವರು, ಹಂತ ಹಂತವಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಹಕಾರಿ ಕ್ಷೇತ್ರದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಕಾನೂನು ಕ್ಷೇತ್ರಗಳ ಚಟುವಟಿಕೆಗಳಲ್ಲೂ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಶ್ರೀಧರ ಪಿ. ಎಸ್. ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಹಾಗೂ ಸಾಸ್ತಾನದ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾನೂನು ವೃತ್ತಿಯೊಂದಿಗೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು, ಕುಂದಾಪುರವನ್ನು ಕೇಂದ್ರವಾಗಿರಿಸಿಕೊಂಡು ಬೇಕರಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಈ ಮೂಲಕ ಹಲವಾರು ಮಂದಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಮಟ್ಟದಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಉಡುಪಿ ಜಿಲ್ಲೆಯ ವಿವಿಧ ಕೃಷಿ ಸಹಕಾರಿ ಸಂಘಗಳು, ಸೊಸೈಟಿಗಳು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಹಾಗೂ ಕುಂದಾಪುರದ ಬೇಕರಿ ಮತ್ತು ಖಾದ್ಯ ತಯಾರಕರ ಹಾಗೂ ಮಾರಾಟಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.
ವೃತ್ತಿ, ಉದ್ಯಮ ಹಾಗೂ ಸಹಕಾರಿ ಕ್ಷೇತ್ರದ ಜವಾಬ್ದಾರಿಗಳ ನಡುವೆಯೂ ಶಿಕ್ಷಣದ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿರುವ ಶ್ರೀಧರ ಪಿ. ಎಸ್. ಅವರು ಕರ್ನಾಟಕ ಕೋ ಆಪರೇಟಿವ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ದೂರಶಿಕ್ಷಣದ ಮೂಲಕ ಸಹಕಾರಿ ನಿರ್ವಹಣಾ ಕೋರ್ಸ್ ಪೂರ್ಣಗೊಳಿಸಿ ‘ಎ’ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಅವರ ಶೈಕ್ಷಣಿಕ ಆಸಕ್ತಿ ಹಾಗೂ ನಿರಂತರ ಕಲಿಕೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಶ್ರೀಧರ ಪಿ. ಎಸ್. ಅವರ ಈ ಸಾಧನೆಗೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ ನ್ಯಾಕ್, ಕಾರ್ಯಾಧ್ಯಕ್ಷ ಶ್ರೀನಿವಾಸ ಶೇರ್ವೆಗಾರ್ ಹೆಬ್ರಿ, ಕೋಶಾಧಿಕಾರಿ ಯು. ಕರುಣಾಕರ ರಾವ್ ಉಡುಪಿ, ಕುಂದಾಪುರ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ನಾಗರಾಜ ರಾವ್ ಕಾಮಧೇನು, ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ಡಾ.ವಾಮನ್ ರಾವ್ ಬೇಕಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಅಗ್ರ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

