ಮಂಗಳೂರು: ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ.
ಈ ಬಾರಿ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 230 ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಇಲಾಖೆಯ ಮಾಹಿತಿಯಂತೆ, ಬಂಟ್ವಾಳ ಉಪವಿಭಾಗದಲ್ಲಿ 48, ಬೆಳ್ತಂಗಡಿ ಉಪವಿಭಾಗದಲ್ಲಿ 103 ಹಾಗೂ ಪುತ್ತೂರು ಉಪವಿಭಾಗದಲ್ಲಿ 79 ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಬೆಳ್ತಂಗಡಿ ಉಪವಿಭಾಗದ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25, ಧರ್ಮಸ್ಥಳದಲ್ಲಿ 20, ಪಂಜಿಕಲ್ಲಿನಲ್ಲಿ 7, ವೇಣೂರಿನಲ್ಲಿ 20, ಉಪ್ಪಿನಂಗಡಿಯಲ್ಲಿ 18 ಹಾಗೂ ಕಡಬದಲ್ಲಿ 13 ಕಾರ್ಯಕ್ರಮಗಳು ನಡೆಯಲಿವೆ.
ಬಂಟ್ವಾಳ ಉಪವಿಭಾಗದಲ್ಲಿ ಬಂಟ್ವಾಳ ಟೌನ್ನಲ್ಲಿ 12, ಬಂಟ್ವಾಳ ಗ್ರಾಮಾಂತರದಲ್ಲಿ 16 ಹಾಗೂ ವಿಟ್ಲದಲ್ಲಿ 20 ಕಾರ್ಯಕ್ರಮಗಳು ನಡೆಯಲಿವೆ.
ಪುತ್ತೂರು ಉಪವಿಭಾಗದಲ್ಲಿ ಪುತ್ತೂರು ಟೌನ್ನಲ್ಲಿ 16, ಪುತ್ತೂರು ಗ್ರಾಮಾಂತರದಲ್ಲಿ 17, ಸುಳ್ಯದಲ್ಲಿ 17, ಸುಬ್ರಹ್ಮಣ್ಯದಲ್ಲಿ 11 ಹಾಗೂ ಬೆಳ್ಳಾರೆಯಲ್ಲಿ 18 ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಬಂದೋಬಸ್ತ್ಗೆ 778 ಅಧಿಕಾರಿ, ಸಿಬ್ಬಂದಿ
ಗಣೇಶೋತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಒಟ್ಟು 778 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇವರಲ್ಲಿ 1 ಹೆಚ್ಚುವರಿ ಪೊಲೀಸ್ ಅಧೀಕ್ಷಕ, 4 ಡಿವೈಎಸ್ಪಿ, 7 ಪಿಐ/ಸಿಪಿಐ, 34 ಪಿಎಸ್ಐ, 52 ಎಎಸ್ಐ ಹಾಗೂ 520 ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಇದರ ಜೊತೆಗೆ 150 ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.
ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 5 ಕೆಎಸ್ಆರ್ಪಿ ಹಾಗೂ 5 ಡಿಎಆರ್ ತುಕಡಿಗಳನ್ನು ಕೂಡ ನಿಯೋಜಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಾರ್ಯಕ್ರಮಗಳ ಸಂಖ್ಯೆ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

