ಕೋಝಿಕ್ಕೋಡ್: ಕೇರಳಕ್ಕೆ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಜಾಲದ ಪ್ರಮುಖ ಆರೋಪಿಗಳಾದ ಯುವಕ ಮತ್ತು ಯುವತಿಯನ್ನು ಪಂತಿರಂಗವು ಪೊಲೀಸರು ದೆಹಲಿಯ ನೋಯ್ಡಾದ ಐಷಾರಾಮಿ ಫ್ಲಾಟ್ವೊಂದರಲ್ಲಿ ಬಂಧಿಸಿದ್ದಾರೆ.
ನೀಲಂಬೂರು ಚೊಕ್ಕಡ್ ಚಪ್ಪತ್ತಿಲ್ನ ಅಜ್ಜಲ್ (32) ಹಾಗೂ ತಿರುವನಂತಪುರ ಮಲಯಿಂಕೀಳು ಕೃಷ್ಣ ಸದನದ ಸೂರ್ಯ (23) ಬಂಧಿತರು. ಮೇ 9ರಂದು ಪಂತಿರಂಗವು ರಾಷ್ಟ್ರೀಯ ಹೆದ್ದಾರಿ ಬಳಿ ಎಂಡಿಎಂಎ ಸಹಿತ ಬಂಧಿತರಾಗಿದ್ದ ಮೂವರು ಆರೋಪಿಗಳ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇವರವರೆಗೆ ತಲುಪಿದ್ದಾರೆ.
ಬಂಧಿತರಿಂದ ಮಾದಕ ವಸ್ತುಗಳ ಪ್ಯಾಕಿಂಗ್ಗೆ ಬಳಸುವ 5 ಸಾವಿರಕ್ಕೂ ಅಧಿಕ ಲಕೋಟೆಗಳು, ಪ್ಯಾಕಿಂಗ್ ಸೀಲರ್, ಹಣ ಎಣಿಸುವ ಯಂತ್ರ, ಎಟಿಎಂ ಕಾರ್ಡ್ಗಳು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ದೆಹಲಿಯಿಂದ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ವಾರಕ್ಕೆ 10 ಕೆಜಿಗೂ ಅಧಿಕ ಎಂಡಿಎಂಎ ಕಳುಹಿಸುತ್ತಿದ್ದರು. ದೆಹಲಿಯಿಂದ ಸೆಕೆಂಡ್ಹ್ಯಾಂಡ್ ಕಾರುಗಳನ್ನು ಖರೀದಿಸಿ ಕೇರಳಕ್ಕೆ ಕಳುಹಿಸುವ ನೆಪದಲ್ಲಿ ಮಾದಕ ವಸ್ತುಗಳ ಸಾಗಾಟ ನಡೆಸುತ್ತಿದ್ದರು ಎನ್ನಲಾಗಿದೆ.
ಅಜ್ಜಲ್ನನ್ನು 2023ರಲ್ಲಿ ಮಲಪ್ಪುರಂನಲ್ಲಿ 100 ಗ್ರಾಂ ಎಂಡಿಎಂಎ ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಸೂರ್ಯ ಬೆಂಗಳೂರಿನಲ್ಲಿ ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾಳೆ. ಕಳೆದ ನಾಲ್ಕು ತಿಂಗಳಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ₹5 ಕೋಟಿಗೂ ಅಧಿಕ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು ಮಿತ್ರ

