ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಅಂಗಾಂಗ ದಾನ ಮತ್ತು ಕಸಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ದಾಖಲಾಗಿದೆ. 2024ರ ಜನವರಿಯಿಂದ 2026ರ ಜೂನ್ವರೆಗೆ 30 ತಿಂಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 1,026 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ.
2024ಕ್ಕೆ ಹೋಲಿಸಿದರೆ 2025ರಲ್ಲಿ ಮರಣೋತ್ತರ ಅಂಗಾಂಗ ದಾನ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 149 ಮಂದಿ ಮರಣದ ಬಳಿಕ ಅಂಗಾಂಗ ದಾನಕ್ಕೆ ಮುಂದಾಗಿದ್ದು, ಇದರಿಂದ 451 ರೋಗಿಗಳಿಗೆ ಹೊಸ ಜೀವನ ದೊರೆತಿದೆ.
ದುಬೈನಲ್ಲಿ ನಡೆದ ಸಮ್ಮೇಳನದಲ್ಲಿ ರಾಷ್ಟ್ರೀಯ ಅಂಗಾಂಗ ಕಸಿ ಸಮಿತಿಯ ಅಧ್ಯಕ್ಷ ಡಾ. ಅಲಿ ಅಬ್ದುಲ್ಕರೀಮ್ ಅಲ್ ಒಬೈಡ್ಲಿ ಈ ಮಾಹಿತಿಯನ್ನು ಹಂಚಿಕೊಂಡರು. 2024ರಲ್ಲಿ 352, 2025ರಲ್ಲಿ 452 ಹಾಗೂ 2026ರ ಮೊದಲ ಆರು ತಿಂಗಳಲ್ಲಿ 222 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ.
ಹೃದಯ, ಮೂತ್ರಪಿಂಡ, ಯಕೃತ್ತು ಮತ್ತು ಶ್ವಾಸಕೋಶ ಸೇರಿದಂತೆ ವಿವಿಧ ಪ್ರಮುಖ ಅಂಗಗಳ ಕಸಿ ಮಾಡಲಾಗಿದೆ. ಸರ್ಕಾರದ ಬೆಂಬಲ, ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಜಾಗೃತಿ ಹಾಗೂ ವೈದ್ಯಕೀಯ ಮೂಲಸೌಕರ್ಯದ ವಿಸ್ತರಣೆಯಿಂದಾಗಿ ಯುಎಇಯ ಅಂಗಾಂಗ ದಾನ ಕಾರ್ಯಕ್ರಮ ವೇಗವಾಗಿ ಬೆಳೆಯುತ್ತಿದೆ.
ಪ್ರಸ್ತುತ ದೇಶದ 9 ಆಸ್ಪತ್ರೆಗಳಲ್ಲಿ ಮೂತ್ರಪಿಂಡ ಕಸಿ ಮತ್ತು 5 ಆಸ್ಪತ್ರೆಗಳಲ್ಲಿ ಯಕೃತ್ತು ಕಸಿ ಸೌಲಭ್ಯಗಳಿವೆ. ಒಂದೇ ಆಸ್ಪತ್ರೆಯಲ್ಲಿ ಒಂದೇ ಸಮಯದಲ್ಲಿ ಹಲವು ಅಂಗಾಂಗಗಳನ್ನು ಕಸಿ ಮಾಡುವ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದೆ.
ನೆರೆಯ ರಾಷ್ಟ್ರಗಳೊಂದಿಗೂ ಯುಎಇ ಸಹಕಾರ ಹೆಚ್ಚಿಸಿಕೊಂಡಿದ್ದು, ಈ ಹಿಂದೆ ಅಮೆರಿಕ ಮತ್ತು ಯುರೋಪ್ಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಕುವೈತ್ನ ಹಲವು ರೋಗಿಗಳು ಇದೀಗ ಯುಎಇಯಲ್ಲೇ ಅಂಗಾಂಗ ಕಸಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಸಮಗ್ರ ಆರೋಗ್ಯ ವಿಮಾ ವ್ಯವಸ್ಥೆಯ ಬೆಂಬಲವೂ ಈ ಯೋಜನೆಗೆ ದೊರೆಯುತ್ತಿದೆ.
ಅಂಗಾಂಗ ಕಸಿ ಮೂಲಕ ರೋಗಿಗಳಿಗೆ ಹೊಸ ಜೀವನ ನೀಡುವುದರ ಜತೆಗೆ, ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಕುಟುಂಬಗಳನ್ನು ದಾನಕ್ಕೆ ಪ್ರೋತ್ಸಾಹಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

