ಲಂಡನ್: ಲಂಡನ್ನ ಥೇಮ್ಸ್ ನದಿಯ ದಡದಲ್ಲಿ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಹಿಂದೂ ಆಚರಣೆಯಾದ ‘ಗಂಗಾ ಆರತಿ’ ನೆರವೇರಿಸಲಾಯಿತು. ‘ಥೇಮ್ಸ್ನಲ್ಲಿ ಗಂಗಾ ಆರತಿ: ಬೆಳಕಿನ ಸಮಾರಂಭ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

ಗ್ರೀನ್ವಿಚ್ನ ಐತಿಹಾಸಿಕ ಓಲ್ಡ್ ರಾಯಲ್ ನೇವಲ್ ಕಾಲೇಜಿನ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ವಾರ್ಷಿಕ ‘ಟೋಟಲಿ ಥೇಮ್ಸ್’ ಉತ್ಸವದ ಸಹಯೋಗದೊಂದಿಗೆ ಚಿನ್ಮಯ ಮಿಷನ್ ಯುಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಭಾರತದ ಗಂಗಾ ನದಿಯ ದಡದಲ್ಲಿ ನಡೆಯುವ ಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲಿ ಥೇಮ್ಸ್ ನದಿ ತೀರದಲ್ಲೂ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸಲಾಗಿತ್ತು.

ಹಿಂದೂ ಸಂಪ್ರದಾಯದಂತೆ ಬಹು-ಶ್ರೇಣಿಯ ಎಣ್ಣೆ ದೀಪಗಳನ್ನು ಬೆಳಗಿಸಿ, ವೇದ ಮಂತ್ರಗಳು ಹಾಗೂ ಸಂಗೀತದೊಂದಿಗೆ ಆರತಿ ನೆರವೇರಿಸಲಾಯಿತು. ಪ್ರಕೃತಿ ಮತ್ತು ನದಿಗಳ ಬಗ್ಗೆ ಗೌರವ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.

ಚಿನ್ಮಯ ಮಿಷನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿಯೂ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿತ್ತು. ಥೇಮ್ಸ್ ನದಿಯ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಬಳಸಿದ ಹೂವುಗಳು, ವಿಗ್ರಹಗಳು ಸೇರಿದಂತೆ ಯಾವುದೇ ವಸ್ತುಗಳನ್ನು ನದಿಗೆ ಎಸೆಯಲಾಗಿಲ್ಲ. ದೀಪಗಳನ್ನು ನದಿಯ ದಡದಲ್ಲೇ ಇರಿಸಲಾಗಿತ್ತು. ತ್ಯಾಜ್ಯ ಕಡಿಮೆ ಮಾಡಲು ಹಾಗೂ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ತಪ್ಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಸಮಾರಂಭದಲ್ಲಿ ಸನ್ಯಾಸಿಗಳು, ವಿವಿಧ ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಬ್ರಿಟಿಷ್-ಭಾರತೀಯ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು. ಯಾವುದೇ ಧರ್ಮ ಅಥವಾ ಹಿನ್ನೆಲೆಯ ಭೇದವಿಲ್ಲದೆ ಎಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಕೃತಿಯ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯುತ ನಡವಳಿಕೆಯ ಸಂದೇಶವನ್ನು ಆರತಿ ಸಾರಿದೆ ಎಂದು ಚಿನ್ಮಯ ಮಿಷನ್ ತಿಳಿಸಿದೆ


