ಕುಂದಾಪುರ: ಮನೆ ಹಾಗೂ ದೇವಸ್ಥಾನದಲ್ಲಿ ಬೀಗ ಮುರಿದು ಕಳ್ಳತನ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಅಮಾಸೆಬೈಲು ಮತ್ತು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹1,19,720 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸೆಪ್ಟೆಂಬರ್ 4ರಂದು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು–ನೆಲ್ಲಿಗದ್ದೆ ಪ್ರದೇಶದಲ್ಲಿ ಮನೆಯವರು ಕೆಲಸಕ್ಕೆ ತೆರಳಿದ್ದ ಸಂದರ್ಭ, ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದರು. ಬಳಿಕ ಕೋಣೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಗೋದ್ರೇಜ್ನಲ್ಲಿದ್ದ ಕಾಗದದಲ್ಲಿ ಸುತ್ತಿಟ್ಟಿದ್ದ ₹97 ಸಾವಿರ ನಗದನ್ನು ಕಳವು ಮಾಡಿದ್ದರು. ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ರೀತಿಯಲ್ಲಿ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ಸುಮಾರು ₹35 ಸಾವಿರದಿಂದ ₹40 ಸಾವಿರ ನಗದು ಕಳವು ಮಾಡಿರುವ ಪ್ರಕರಣವೂ ದಾಖಲಾಗಿತ್ತು.
ಎರಡೂ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮದ ರಾಕೇಶ್ ಎಚ್. (28) ಹಾಗೂ ಜಕ್ಕೆನಹಳ್ಳಿ ಗ್ರಾಮದ ನಂದೀಶ ಎಂ. (24) ಎಂಬವರನ್ನು ಹುಲಿಕಲ್ ಘಾಟ್ ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಲಾಗಿದ್ದ ₹1,19,720 ನಗದನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ನೇತೃತ್ವದಲ್ಲಿ ಎರಡೂ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

