ಮುಂಬೈ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ದೆಹಲಿಯ ಬದಲು ಗುಜರಾತ್ನ ಕೆವಾಡಿಯಾ (ಏಕ್ತಾನಗರ)ದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸ್ಥಳಾಂತರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ಗುಜರಾತ್ಗೆ ಸ್ಥಳಾಂತರಿಸಿರುವ ಸರ್ಕಾರದ ನಿರ್ಧಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಾಲಿವುಡ್ ನಟ ಪರೇಶ್ ರಾವಲ್ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ದೆಹಲಿಗೆ ಮಾತ್ರ ಸೀಮಿತವಾಗದೆ ದೇಶದ ವಿವಿಧ ರಾಜ್ಯಗಳಲ್ಲಿಯೂ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪರೇಶ್ ರಾವಲ್, ಗುಜರಾತ್ ಭಾರತದ ಭಾಗವಾಗಿದ್ದು, ಅಲ್ಲಿಯೂ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

“ಗುಜರಾತ್ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿಲ್ಲ. ಅದು ನಮ್ಮ ದೇಶದ ಭಾಗ. ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳು ಎಲ್ಲ ರಾಜ್ಯಗಳಲ್ಲಿಯೂ ನಡೆಯಬೇಕು” ಎಂದು ಪರೇಶ್ ರಾವಲ್ ಹೇಳಿದ್ದಾರೆ.
ರಾಷ್ಟ್ರೀಯ ಕಾರ್ಯಕ್ರಮಗಳನ್ನು ದೆಹಲಿಗೆ ಮಾತ್ರ ಸೀಮಿತಗೊಳಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಕಾರ್ಯಕ್ರಮಗಳೂ ದೇಶದ ವಿವಿಧ ಭಾಗಗಳಲ್ಲಿ ನಡೆಯುವಂತಾಗಬೇಕು ಎಂದು ಹೇಳಿದ್ದಾರೆ.
ರಾಹುಲ್ ಧೋಲಾಕಿಯಾ ವಿರೋಧ
ಇದೇ ವೇಳೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯಿಂದ ಗುಜರಾತ್ನ ಕೆವಾಡಿಯಾಗೆ ಸ್ಥಳಾಂತರಿಸಿರುವುದಕ್ಕೆ ಚಲನಚಿತ್ರ ನಿರ್ದೇಶಕ ರಾಹುಲ್ ಧೋಲಾಕಿಯಾ ಆಕ್ಷೇಪ ವ್ಯಕ್ತಪಡಿಸಿದ್ದರು.
ದೆಹಲಿಯಲ್ಲೇ ಕಾರ್ಯಕ್ರಮ ನಡೆಸಬೇಕು ಎಂಬ ನಿರ್ದಿಷ್ಟ ಕಾರಣ ತನಗಿಲ್ಲ ಎಂದಿರುವ ಅವರು, ಆದರೆ ಗುಜರಾತ್ಗೇ ಏಕೆ ಸ್ಥಳಾಂತರಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದ್ದಾರೆ. ಸಿನಿಮಾರಂಗಕ್ಕೆ ಮಹತ್ವದ ಕೊಡುಗೆ ನೀಡಿರುವ ಇತರ ರಾಜ್ಯಗಳಿಗೂ ಇಂತಹ ಗೌರವ ನೀಡಬಹುದಲ್ಲವೇ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು.
72 ವರ್ಷಗಳ ಬಳಿಕ ಹೊಸ ಸ್ಥಳ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ 72 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೆಹಲಿಯ ಹೊರಗೆ ಆಯೋಜಿಸಲಾಗುತ್ತಿದೆ. 1954ರಲ್ಲಿ ನಡೆದ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿತ್ತು.
ಈ ಬಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ಇರುವ ಏಕ್ತಾನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಯಡಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ದೆಹಲಿಯ ಹೊರಗೆ ನಡೆಸಲು ನಿರ್ಧರಿಸಲಾಗಿದೆ.
ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಲಿದ್ದಾರೆ
ಮಂಗಳೂರು ಮಿತ್ರ

