ಮಂಗಳೂರು: ‘ಪಂಚರಂಗಿ’ ಬ್ಯಾನರ್ ಅಡಿಯಲ್ಲಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಅಮರ್ಥ’ ಕನ್ನಡ ಸಿನಿಮಾ ಸೆ.18ರಂದು ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಗುರು ಹೆಗ್ಡೆ ತಿಳಿಸಿದರು.
ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಂ ನಿರ್ದೇಶನದ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಮೇಘನಾ ರಾಜ್ ಸರ್ಜಾ ಹಾಗೂ ಗುರು ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ ಎಂದರು.
‘ಅಮರ್ಥ’ ಎಂದರೆ ಅಂತ್ಯವಿಲ್ಲದ್ದು ಎಂಬ ಅರ್ಥ.ಸಂಸ್ಕೃತ ಪದವಾಗಿರುವ ಅಮರ್ಥ ಚಿತ್ರದ ಕಥೆ ಉತ್ತಮವಾಗಿದ್ದು, ಕಥೆಯೊಂದಿಗೆ ಹಾಸ್ಯವೂ ಬೆಸೆದುಕೊಂಡಿದೆ. ಪ್ರತಿಯೊಬ್ಬರಿಗೂ ಸಂಬಂಧಿಸಬಹುದಾದ ಹಾಗೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಕಥೆಯನ್ನು ಚಿತ್ರದಲ್ಲಿ ನೀಡಲಾಗಿದೆ ಎಂದು ಗುರು ಹೆಗ್ಡೆ ಹೇಳಿದರು.

ಶಿರ್ವ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ನಾಯಕಿ ಮೇಘನಾ ರಾಜ್ ಸರ್ಜಾ ಮಾತನಾಡಿ, ಶ್ರೀನಗರ ಕಿಟ್ಟಿ ಅವರೊಂದಿಗೆ ಇದು ತಮ್ಮ ಮೂರನೇ ಸಿನಿಮಾ. ಚಿತ್ರದಲ್ಲಿ ಇಬ್ಬರ ಪಾತ್ರಗಳೂ ವಿಭಿನ್ನವಾಗಿವೆ ಎಂದರು.
ಶ್ರೀನಗರ ಕಿಟ್ಟಿ ಮಾತನಾಡಿ, ಗುರು ಹೆಗ್ಡೆ ಅವರು ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿ ಚಿತ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುಭಾಷಿಣಿ ಶೆಟ್ಟಿ, ಆರಾಧನಾ ಭಟ್, ವಿನಯ್ ಪ್ರೀತಂ, ಪಿಎಲ್ ಅಶ್ರಿತ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

