ಉಳ್ಳಾಲ, ಸೆ.16: ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದ ಬಳಿ ಸೋಮವಾರ ರಾತ್ರಿ ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 21 ವರ್ಷದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ.
ಕುತ್ತಾರಿನ ಆಯೆರೆಬೆಟ್ಟು ನಿವಾಸಿಗಳಾದ ಗೋಪಾಲ ಮತ್ತು ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮೆದುಳು ನಿಷ್ಕ್ರಿಯಗೊಂಡ ಯುವಕ. ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ವರ್ಷಿತ್ ಕುತ್ತಾರಿನಿಂದ ಮನೆ ಕಡೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಕೊರಗಜ್ಜನ ಆದಿಕ್ಷೇತ್ರದ ಸಮೀಪದ ದುರ್ಗಾ ಆಟೋ ವರ್ಕ್ಸ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್ಗೆ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ವರ್ಷಿತ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯಕೀಯ ಪರೀಕ್ಷೆಗಳ ಬಳಿಕ ಬುಧವಾರ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ವರ್ಷಿತ್ ಅವರ ಕಿಡ್ನಿ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ವಿವಿಧ ಆಸ್ಪತ್ರೆಗಳಿಂದ ಬೇಡಿಕೆ ಬಂದಿದ್ದು, ಅಂಗಾಂಗಗಳನ್ನು ‘ಝೀರೋ ಟ್ರಾಫಿಕ್’ ವ್ಯವಸ್ಥೆಯ ಮೂಲಕ ರವಾನಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಪಘಾತದಲ್ಲಿ ಸ್ಕೂಟರ್ ಸವಾರ ಧೀರಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವಿವಾಹಿತನಾಗಿದ್ದ ವರ್ಷಿತ್ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಘಟನೆ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

