ಮಂಗಳೂರು: ದಿ.ಎಂ.ಆರ್.ಪೈ ಅವರ ಸ್ಮರಣಾರ್ಥ ಎಂ.ಆರ್.ಪೈ ಫೌಂಡೇಶನ್ ಮತ್ತು ಫೋರಂ ಆಫ್ ಫ್ರೀ ಎಂಟರ್ಪ್ರೈಸ್, ಮುಂಬೈನ ಸಹಯೋಗದೊಂದಿಗೆ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ವತಿಯಿಂದ ತರಗತಿಯ ಪ್ರತಿನಿಧಿಗಳು, ಕ್ಲಬ್ ಸಲಹೆಗಾರರು ಮತ್ತು ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಿಗೆ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪ್ರೇರಕ ಮತ್ತು ಕಾರ್ಪೊರೇಟ್ ವೃತ್ತಿಪರ ತರಬೇತುದಾರ ಸುಧೀರ್ ಪೈ ಸಾಫ್ಟ್ ಸ್ಕಿಲ್ಸ್ , ಮತ್ತು ಜೀವನ ಕೌಶಲ್ಯ ತರಬೇತುದಾರ ರಾಜೀವ್ ಕುಮಾರ್ ಲುವ್ ಅವರ ಜತೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಪ್ರಿಯಾ ವಿ. ಫ್ರ್ಯಾಂಕ್, ಮತ್ತು ವಿಭಾಗ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಕುಮಾರ್ ಲುವ್ ಅವರು ಮಂಗಳೂರಿನ ಹೆಸರಾಂತ ಗ್ರಾಹಕ ಕಾರ್ಯಕರ್ತ ಎಂ.ಆರ್.ಪೈ ಅವರ ಜೀವನ ಮತ್ತು ಪರಂಪರೆಯನ್ನು ಉಲ್ಲೇಖಿಸಿ ಪೈ ಅವರ ಸರಳ ಮತ್ತು ಪರಿಣಾಮಕಾರಿ ಉಪಕ್ರಮಗಳು ಸಾವಿರಾರು ಜನರಿಗೆ ಪ್ರಯೋಜನವನ್ನು ನೀಡಿವೆ. ಕೇವಲ ರಾಜಕೀಯ ನಾಯಕರಿಗಿಂತ ಜವಾಬ್ದಾರಿಯುತ ನಾಗರಿಕರನ್ನು ಮತ್ತು ಆಯಾ ಕ್ಷೇತ್ರಗಳಲ್ಲಿ ನಾಯಕರನ್ನು ಬೆಳೆಸುವುದು ಶಿಬಿರದ ಉದ್ದೇಶವಾಗಿದೆ ಎಂದರು. “ಕತ್ತಲನ್ನು ಶಪಿಸುವುದಕ್ಕಿಂತ ಮೇಣದಬತ್ತಿಯನ್ನು ಬೆಳಗಿಸುವುದು ಉತ್ತಮ” ಎಂಬ ಎಂ.ಆರ್.ಪೈ ಅವರ ತತ್ವವನ್ನು ಉಲ್ಲೇಖಿಸಿದ ಅವರು ವಿದ್ಯಾರ್ಥಿಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಮುಂದಾಗುವಂತೆ ಕರೆ ನೀಡಿದರು.
ಎಂ.ಆರ್.ಪೈ ಫೌಂಡೇಶನ್ 2006 ರಿಂದ ದೇಶಾದ್ಯಂತ ನಾಯಕತ್ವದ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದ ಅವರು ಸಣ್ಣ ಪಟ್ಟಣಗಳಿಂದ ಯುವಕರಿಗೆ ಮಾನ್ಯತೆ ಮತ್ತು ಅವಕಾಶಗಳನ್ನು ಒದಗಿಸುವಲ್ಲಿ ಎಂ.ಆರ್.ಪೈ ಮಾದರಿಯಾಗಿದ್ದರು ಎಂದರು. ಎರಡು ದಿನಗಳ ಈ ಶಿಬಿರದಲ್ಲಿ ನಾಯಕತ್ವ, ಸಂವಹನ, ಟೀಂ ವರ್ಕ್, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯುತ ಪೌರತ್ವವನ್ನು ಬೆಳಸುವ ಕುರಿತ ವಿಚಾರಗಳ ಕುರಿತು ಚರ್ಚಿಸಲಿದೆ. ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷೆ ಕೃತ್ತಿಕಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಏಕ್ತಾ ವಂದಿಸಿದರು.

