ಹಾಸನ: ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆ ಗ್ರಾಮದ ಶ್ರೀದೇವಿ ಲಾಡ್ಜ್ನ ಬಾತ್ರೂಮ್ನಲ್ಲಿ ಬೆಂಗಳೂರಿನ 23 ವರ್ಷದ ವರ್ಷ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ವರ್ಷ ಕಳೆದ ಶುಕ್ರವಾರ ರಘು ಮತ್ತು ದರ್ಶನ್ ಎಂಬ ಇಬ್ಬರು ಯುವಕರೊಂದಿಗೆ ಲಾಡ್ಜ್ಗೆ ಆಗಮಿಸಿದ್ದರು. ಮೂವರು ನಾಲ್ಕೈದು ದಿನಗಳಿಂದ ಅಲ್ಲಿಯೇ ತಂಗಿದ್ದು, ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ ಬುಧವಾರ ಯುವತಿ ಬಾತ್ರೂಮ್ನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಯುವತಿಯೊಂದಿಗೆ ಲಾಡ್ಜ್ನಲ್ಲಿ ತಂಗಿದ್ದ ರಘು ಹಾಗೂ ದರ್ಶನ್ ಘಟನೆ ಬಳಿಕ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇಬ್ಬರೂ ಆಟೋ ಚಾಲಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಾಲತೇಶ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯಿಂದ ಸಾವಿನ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

