ಮಂಗಳೂರು, ಸೆ.16: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ತೋರಿಸಿ ಮೊಬೈಲ್ ಫೋನ್ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹25 ಸಾವಿರ ದಂಡ ವಿಧಿಸಿದೆ.
2020ರ ನವೆಂಬರ್ 16ರಂದು ಬೆಳಗ್ಗೆ ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ ಹಿಂಭಾಗದಿಂದ ಎನ್ಎಂಪಿಎ ಮುಖ್ಯ ಆಡಳಿತ ಕಚೇರಿಯತ್ತ ನಡೆದುಕೊಂಡು ಹೋಗುತ್ತಿದ್ದ ಬಿಹಾರ ಮೂಲದ ಗೋವಿಂದ್ ಕುಮಾರ್ ಅವರನ್ನು ಪೊರ್ಕೋಡಿ, ಕೆಂಜಾರು ನಿವಾಸಿ ಜಾವೀದ್ ಆಖ್ತರ್ ಅಲಿಯಾಸ್ ಅಖ್ತರ್ (28) ಮತ್ತು ಕಸಬಾ ಬೆಂಗ್ರೆ ನಿವಾಸಿ ತೋಯಿದ್ ಖಾದರ್ ಯಾನೆ ತೋಯಿ (24) ಎಂಬವರು ಸ್ಕೂಟರ್ನಲ್ಲಿ ಬಂದು ತಡೆದಿದ್ದರು. ಕಬ್ಬಿಣದ ರಾಡ್ ತೋರಿಸಿ ಬೆದರಿಸಿ, ಸುಮಾರು ₹5,000 ಮೌಲ್ಯದ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಅಜ್ಮತ್ ಅಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಸುಲಿಗೆ ಮಾಡಿದ್ದ ಸೊತ್ತನ್ನು ವಶಪಡಿಸಿಕೊಂಡಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) ನ್ಯಾಯಾಧೀಶರಾದ ಮೋಹನ್ ಜೆ.ಎಸ್. ಅವರು ಸೆ.16ರಂದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿ, ಐಪಿಸಿ ಕಲಂ 392 ಜೊತೆಗೆ 34ರ ಅಡಿಯಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಭದರಿನಾಥ ನೈಯಾರಿ ಅವರು ವಾದ ಮಂಡಿಸಿದ್ದರು

