ಮಂಗಳೂರು: ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರ ಅಗತ್ಯ ನಿರ್ಧಾರ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಹೇಳಿದರು
ಪತ್ರಿಕಾಭವನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸುಮಾರು ಐದು ಲಕ್ಷ ಜನಸಂಖ್ಯೆ ಹೊಂದಿರುವ ಆದಿದ್ರಾವಿಡ ಸಮುದಾಯದ ಆರಾಧ್ಯ ಕ್ಷೇತ್ರವಾದ ಮೂಡುಬಿದಿರೆ ಮಿಜಾರಿನ ಅಲೇರಿಯ ಶ್ರೀ ಸತ್ಯ ಸಾರಮಾನಿ ಕಾನದ ಕಟದರ ಮೂಲಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಇದಲ್ಲದೆ, ಒಳ ಮೀಸಲಾತಿ ಜಾರಿ ಪ್ರಕ್ರಿಯೆಯಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಿಲ್ಲ ,ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ‘ಸಾರಮಾನಿ’ ಹೆಸರಿನಲ್ಲಿ ಸೇರ್ಪಡೆಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಇದಕ್ಕಾಗಿ ಅಗತ್ಯವಿರುವ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸರ್ಕಾರ ಅನುದಾನ ಒದಗಿಸಬೇಕು ಎಂದರು,
ಇನ್ನೊಂದೆಡೆ, ಈ ನಡುವೆ ನಮ್ಮ ಸಮುದಾಯದಲ್ಲಿ ಒಂದು ಸಣ್ಣ ಗುಂಪು ನಮ್ಮ ಸಮುದಾಯವನ್ನು ಮನ್ಸ ಸಮಾಜವೆಂದು ಗುರುತಿಸುವಂತೆ ಆಗ್ರಹಿಸಿದೆ. ಇದಕ್ಕೆ ನಮ್ಮ ಇಡೀ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ. ಸುಮಾರು 100ರಿಂದ 150ರಷ್ಟು ಮಂದಿಯಿರುವ ಈ ಗುಂಪು ಸಮುದಾಯದ ವಿರೋಧ ಕಟ್ಟಿಕೊಂಡು ಸಮಾಜದಲ್ಲಿ ತೀರಾ ನಿಂದನೀಯವಾಗಿರುವ ಪದವನ್ನು ಜಾತಿ ಸೂಚಕವಾಗಿ ಪರಿಶಿಷ್ಟ ಜಾತಿ ಪಟ್ಟಿಗೆ ಆಗ್ರಹಿಸುತ್ತಿರುವುದು ಖಂಡನೀಯ. ಹೀಗಾಗಿ ಇವರ ಬೇಡಿಕೆಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸನ್ ಅರ್ಬಿಗುಡ್ಡೆ, ಸುರೇಶ್ ಪಿ.ಬಿ ಉಪಸ್ಥಿತರಿದ್ದರು

