ಮಂಗಳೂರು: ಅವಿಕಾ ಪ್ರೊಡಕ್ಷನ್ ಹಾಗೂ ಬಿಆರ್ಬಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ, ಅರ್ಜುನ್ ದೇವ್ ನಿರ್ದೇಶಿಸಿ ಅಭಿನಯಿಸಿರುವ ಬಹುನಿರೀಕ್ಷಿತ ತುಳು ಸಿನಿಮಾ ‘ಟಾಸ್’ ಮಂಗಳೂರಿನ ಬಿಗ್ ಸಿನೆಮಾಸ್ನಲ್ಲಿ ನಡೆದ ಚಿತ್ರ ಬಿಡುಗಡೆಯ ಸಮಾರಂಭದ ಮೂಲಕ ರಾಜ್ಯಾದ್ಯಂತ ತೆರೆಗೆ ಬಂದಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಸಿನಿಮಾದ ಬಿಡುಗಡೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ದಿನವೇ ಬಹುನಿರೀಕ್ಷಿತ ತುಳು ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ಡಾ. ದೇವದಾಸ್ ಕಾಪಿಕಾಡ್ ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸೃಜನಶೀಲತೆಯಿಂದ ಮೂಡಿಬಂದಿರುವ ‘ಟಾಸ್’ ಕೂಡ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಹಿರಿಯ ಕಲಾವಿದ ಡಾ. ದೇವದಾಸ್ ಕಾಪಿಕಾಡ್ ಅವರ ಸೃಜನಶೀಲ ಕೊಡುಗೆಯೊಂದಿಗೆ ‘ಟಾಸ್’ ಸಿನಿಮಾ ಮೂಡಿಬಂದಿದೆ. ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿ ಸಿನಿಮಾ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದರು.

ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ‘ಟಾಸ್’ ಸಿನಿಮಾ ನಿರ್ಮಾಪಕರು ಹಾಗೂ ಚಿತ್ರತಂಡಕ್ಕೆ ಉತ್ತಮ ಕಾಸ್ ತಂದುಕೊಡಲಿ. ತುಳುನಾಡಿನಾದ್ಯಂತ ಈ ಚಿತ್ರ ಹೆಸರು ಮಾಡಲಿ. ಅರ್ಜುನ್ ದೇವ್ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಟಾಸ್’ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಲಿ ಎಂದು ಹಾರೈಸಿದರು.

ಡಾ. ಶಿವಶರಣ್ ಶೆಟ್ಟಿ ಮಾತನಾಡಿ, ಅರ್ಜುನ್ ಕಾಪಿಕಾಡ್ ಸಿನಿಮಾಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಪರಿಶ್ರಮಕ್ಕೆ ಉತ್ತಮ ಯಶಸ್ಸು ದೊರೆಯಲಿ ಎಂದರು.

ಸಮಾರಂಭದಲ್ಲಿ ಡಾ.ದೇವದಾಸ್ ಕಾಪಿಕಾಡ್, ಕದ್ರಿ ಮಣಿಕಾಂತ್, ಭೋಜರಾಜ ವಾಮಂಜೂರು, ಶರ್ಮಿಳಾ ಡಿ. ಕಾಪಿಕಾಡ್, ತಿಮ್ಮಪ್ಪ ಕುಲಾಲ್,ಸುರೇಶ್ ಕುಲಾಲ್, ಸಾಯಿಕ್ರಷ್ಣ ಕುಡ್ಲ, ವೀರೇಂದ್ರ ಶೆಟ್ಟಿ ಕಾವೂರು, ಗಿರೀಶ್ ಎಂ. ಶೆಟ್ಟಿ ಕಟೀಲು, ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೊಳ್ಳಾರ್, ಕಿಶೋರ್ ಕೊಟ್ಯಾರಿ, ರಾಕೇಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಾಳ ಜಗನ್ನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಫಯಾಜ್ ಅಬ್ದುಲ್ ರಝಾಕ್ ದುಬೈ, ಇಝಾಕ್, ಚೈತ್ರ ಶೆಟ್ಟಿ, ಸದಾಶಿವ ಅಮೀನ್, ಜೋಯೆಲ್ ಡಿ. ಸೋಜ, ರೋಶನ್ ಶೆಟ್ಟಿ, ಚೈತ್ರಾ ಶೆಟ್ಟಿ, ಶೈಲಶ್ರೀ ಮುಲ್ಕಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿತೇಶ್ ಉಳಿಯ ಕಾರ್ಯಕ್ರಮ ನಿರ್ವಹಿಸಿದರು.

ಎರಡು ಹಂತಗಳಲ್ಲಿ ಚಿತ್ರೀಕರಣ
ರಾಜ್ಯ ಪ್ರಶಸ್ತಿ ಪುರಸ್ಕೃತ ‘ತೆಲಿಕೆದ ಬೊಳ್ಳಿ’ ಡಾ. ದೇವದಾಸ್ ಕಾಪಿಕಾಡ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳೊಂದಿಗೆ ‘ಟಾಸ್’ ಸಿನಿಮಾ ಸಿದ್ಧಗೊಂಡಿದೆ. ಅರ್ಜುನ್ ದೇವ್ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಪಿ ಆ್ಯಂಡ್ ವೈ ವರ್ಲ್ಡ್ ಟೂರ್ಸ್ ಎಲ್ಎಲ್ಪಿ ವತಿಯಿಂದ ಸಾಗರ್ ಪೂಜಾರಿ ನಿರ್ಮಿಸಿರುವ ಸಿನಿಮಾಕ್ಕೆ ಜೋಯೆಲ್ ಶಮನ್ ಡಿ’ಸೋಜಾ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಹಾಗೂ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ. ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ಹಾಗೂ ವಿಕ್ರಮ್ ದೇವಾಡಿಗ ಸಹ ನಿರ್ದೇಶಕರಾಗಿ, ಸೌರವ್ ರಾಮ್, ಸುಜಿತ್, ವಿನೋದ್ ಮತ್ತು ಆಶಿಷ್ ರಾವ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ತುಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ‘ಟಾಸ್’ ಸಿನಿಮಾಕ್ಕೆ ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರ ಸಹಕಾರವೂ ದೊರೆತಿದೆ.

ಹಲವು ಕೇಂದ್ರಗಳಲ್ಲಿ ಪ್ರದರ್ಶನ
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ, ಬೆಳ್ತಂಗಡಿ, ಪುತ್ತೂರು ಸೇರಿದಂತೆ ಕರಾವಳಿಯ ವಿವಿಧ ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿಯೂ ಚಿತ್ರ ಪ್ರದರ್ಶನ ಕಾಣುತ್ತಿದೆ.
ಕಾಮಿಡಿಗೆ ಹೆಚ್ಚಿನ ಆದ್ಯತೆ ನೀಡಿರುವ ‘ಟಾಸ್’ನಲ್ಲಿ ಸೆಂಟಿಮೆಂಟ್, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳನ್ನೂ ಒಳಗೊಂಡಿದ್ದು, ಸಂಪೂರ್ಣ ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾ ಚಿತ್ರವಾಗಿ ರೂಪಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.
ಚಿತ್ರ : ಸತೀಶ್ ಕಾಪಿಕಾಡ್

