ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಕರಾವಳಿ ಭಾಗಕ್ಕೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲು ತೀರ್ಮಾನಿಸಲಾಗಿದ್ದು, ಒಟ್ಟು ₹32,611 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಒಟ್ಟು ಮೊತ್ತದಲ್ಲಿ ಸುಮಾರು ₹16,000 ಕೋಟಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹಾಗೂ ಉಳಿದ ಮೊತ್ತವನ್ನು ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.
ತುಳುವಿಗೆ ಅಧಿಕೃತ ಆಡಳಿತ ಭಾಷೆಯ ಸ್ಥಾನ

ಕರಾವಳಿಯ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ಅಧಿಕೃತ ಆಡಳಿತಾತ್ಮಕ ಮಾನ್ಯತೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡದೊಂದಿಗೆ ತುಳು ಭಾಷೆಯನ್ನೂ ಆಡಳಿತಾತ್ಮಕ ಉದ್ದೇಶಗಳಿಗೆ ಬಳಸುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ನಿರ್ಧಾರಕ್ಕೆ ತುಳು ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ವಲಯಗಳಿಂದ ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗಿತ್ತು.
ತುಳು ಭಾಷೆಯ ಅಭಿವೃದ್ಧಿ, ಅನುವಾದ, ತರಬೇತಿ ಸೇರಿದಂತೆ ಆಡಳಿತಾತ್ಮಕ ಬಳಕೆಗೆ ಸರ್ಕಾರದಿಂದ ವಾರ್ಷಿಕ ಅನುದಾನ ಒದಗಿಸುವ ವ್ಯವಸ್ಥೆಯೂ ಇರಲಿದೆ ಎಂದು ವರದಿಯಾಗಿದೆ.

ಕರಾವಳಿ–ಮಲೆನಾಡಿಗೆ ಹೊಸ ಪ್ರವಾಸೋದ್ಯಮ ನೀತಿ
ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ‘ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ, ಹೂಡಿಕೆ ಉತ್ತೇಜನ ಹಾಗೂ ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಈ ನೀತಿ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮೀನುಗಾರಿಕೆ ಕ್ಷೇತ್ರಕ್ಕೆ ಆದ್ಯತೆ
ಮೀನುಗಾರಿಕೆ ಹಾಗೂ ಬ್ಲೂ ಎಕಾನಮಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಸರ್ಕಾರ ಮುಂದಾಗಿದೆ. ಮೀನುಗಾರಿಕೆ ಸಂಬಂಧಿತ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಕಾಲೇಜಿನ ಪ್ರವೇಶ ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ₹549.79 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಹೆಸರು?
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸರ್ಕಾರ ಮುಂದಾಗಿದೆ. ಕರಡು ಅಧಿಸೂಚನೆ ಹೊರಡಿಸಿ, ಸಾರ್ವಜನಿಕರಿಗೆ ಆಕ್ಷೇಪಣೆ ಹಾಗೂ ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ
ಬೆಂಗಳೂರಿನ ಹೊರಗೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಇತರ ಜಿಲ್ಲೆಗಳಲ್ಲಿ ಇಂತಹ ಸಭೆಗಳನ್ನು ನಡೆಸುವ ಉದ್ದೇಶವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮುಂದಿನ 15 ತಿಂಗಳಲ್ಲಿ ಸುಮಾರು 10ರಿಂದ 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದ್ದು, ಅಗತ್ಯ ಮತ್ತು ಸಾಮರ್ಥ್ಯ ಇರುವ ಪ್ರದೇಶಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿಗೆ ಸಮಗ್ರ ಒತ್ತು
ದಕ್ಷಿಣ ಕನ್ನಡವು ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರ, ಬಂದರು ಹಾಗೂ ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದ ಗಮನ ಸೆಳೆದಿರುವ ಜಿಲ್ಲೆ ಎಂದು ಮುಖ್ಯಮಂತ್ರಿ ವಿವರಿಸಿದರು. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳಿಂದ ಬಂದ ಸಲಹೆಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ವಿವಿಧ ವಿಚಾರಗಳ ಕುರಿತು ಮುಂದಿನ ದಿನಗಳಲ್ಲೂ ಸಂಬಂಧಿತ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಮಂಗಳೂರು ಮಿತ್ರ.ಕಾಂ

