ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪ್ರಮುಖ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದಾರೆ. ವೈದ್ಯರ ಸಲಹೆಯಂತೆ ಶಾ ಅವರು ತಂಗಿದ್ದ ಹೋಟೆಲ್ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹುಬ್ಬಳ್ಳಿಯ ಗಬ್ಬೂರು ಪ್ರದೇಶದಲ್ಲಿ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಕಾಲೇಜಿನ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಸಾಮರ್ಥ್ಯದ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಮಿತ್ ಶಾ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಕಾರ್ಯಕ್ರಮದಲ್ಲಿ ಕೆಎಲ್ಇ ಸೊಸೈಟಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರು ಶಾ ಅವರ ಅನುಪಸ್ಥಿತಿಯ ಕುರಿತು ಮಾಹಿತಿ ನೀಡಿದರು. ಆರೋಗ್ಯದ ಕಾರಣ ವೈದ್ಯರ ಸಲಹೆಯಂತೆ ಶಾ ಅವರು ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದೇ ವೇಳೆ, ತಮ್ಮ ಸಂದೇಶವನ್ನು ಕಾರ್ಯಕ್ರಮದ ಮೂಲಕ ಜನರಿಗೆ ತಲುಪಿಸುವಂತೆ ಶಾ ಸೂಚಿಸಿದ್ದಾರೆ ಎಂದೂ ಹೇಳಿದರು.
ಶಾ ಅವರ ಬದಲಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಮತ್ತು ಶ್ರೀ ಜಗದ್ಗುರು ಮೂರುಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ನೂತನ ಕಟ್ಟಡಗಳು ಹಾಗೂ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಬೃಹತ್ ವೈದ್ಯಕೀಯ ಕ್ಯಾಂಪಸ್ ನಿರ್ಮಿಸಲಾಗಿದೆ. ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ₹700 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕ್ಯಾಂಪಸ್ನಲ್ಲಿ 30 ಲಕ್ಷ ಚದರ ಅಡಿಗೂ ಅಧಿಕ ನಿರ್ಮಿತ ಪ್ರದೇಶವಿದೆ ಎಂದು ವರದಿಯಾಗಿದೆ.
ವೈದ್ಯಕೀಯ ಶಿಕ್ಷಣದ ಜೊತೆಗೆ ಅತ್ಯಾಧುನಿಕ ಚಿಕಿತ್ಸೆ, ರೋಗನಿರ್ಣಯ ಮತ್ತು ವೈದ್ಯಕೀಯ ಸಂಶೋಧನೆಗೆ ಈ ಕೇಂದ್ರಗಳು ಆದ್ಯತೆ ನೀಡಲಿವೆ.
ಅಮಿತ್ ಶಾ ಶುಕ್ರವಾರ ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಶನಿವಾರ ಬೆಳಗಾವಿ ಜಿಲ್ಲೆಯ ಎಕ್ಸಂಬಾದಲ್ಲಿ ಶ್ರೀ ಬೀರೇಶ್ವರ ಸಹಕಾರಿ ಪತ್ತಿನ ಸಂಘದ ನೂತನ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಬೇಕಿತ್ತು.
ಸದ್ಯ ವೈದ್ಯರು ಅಮಿತ್ ಶಾ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

