ಉಪ್ಪಿನಂಗಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಗಾಯಗೊಂಡ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೆರ್ನೆ ನಿವಾಸಿ ಸಿನಾನ್ (32) ಹಾಗೂ ಅವರ ಪತ್ನಿ ನೂರುನ್ನಿಸಾ (28) ನಡುವೆ ಫೋನ್ ಕರೆಯ ವೇಳೆ ವೈವಾಹಿಕ ವಿಚಾರವಾಗಿ ಕಲಹ ಉಂಟಾಗಿತ್ತು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಸುಮಾರು ಮೂರುವರೆ ವರ್ಷದ ಮಗು ಹಾಗೂ ಪತಿಯ ತಂಗಿಯ ಮೂರು ವರ್ಷದ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಬಾವಿಯಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ ರಕ್ಷಣಾ ಕಾರ್ಯದ ವೇಳೆ ಪತಿಯ ತಂಗಿಯ ಮಗು ಮೃತಪಟ್ಟಿರುವುದು ತಿಳಿದುಬಂದಿದೆ. ಇನ್ನೊಂದು ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರಂ 121/2026ರಂತೆ ಪ್ರಕರಣ ದಾಖಲಾಗಿದ್ದು, ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

