ಮಂಗಳೂರು: ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ಸೆಪ್ಟೆಂಬರ್ 9 ಮತ್ತು 10ರಂದು 36 ಗಂಟೆಗಳ ಕಾಲ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ತೀವ್ರವಾಗಿ ಖಂಡಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಸತೀಶ್ ಜಾರಕಿಹೊಳಿ ಅವರ ರಾಜಕೀಯ ಯಶಸ್ಸು ಮತ್ತು ತಂತ್ರಗಾರಿಕೆಯನ್ನು ಸಹಿಸದ ಕೇಂದ್ರ ಸರ್ಕಾರವು ವಿಪಕ್ಷ ನಾಯಕರ ಆತ್ಮವಿಶ್ವಾಸ ಕುಗ್ಗಿಸುವ ಉದ್ದೇಶದಿಂದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರ ಮೇಲೆ ಈ ಹಿಂದೆ ನಡೆದಿರುವ ಹಲವು ED ದಾಳಿಗಳಿಂದ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅವರು ಹೇಳಿದರು.
ಸತೀಶ್ ಜಾರಕಿಹೊಳಿ ಅವರು ಕೇವಲ ರಾಜಕಾರಣಿಯಾಗಿರದೆ ಸಾಮಾಜಿಕ ಚಿಂತನೆ ಹೊಂದಿರುವ ನಾಯಕರು. ಶಿಕ್ಷಣ, ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ತಂದೆ-ತಾಯಿ ಇಲ್ಲದ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. UPSC, KPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಜನಪರ ಚಿಂತನೆಯ ನಾಯಕನ ಮೇಲೆ ED ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಮಾನ ಎಂದು ದಿನೇಶ್ ಮೂಳೂರು ಆರೋಪಿಸಿದರು.
ಸಮಾಜದ ಬಡವರು ಹಾಗೂ ಎಲ್ಲಾ ವರ್ಗದವರ ಪರವಾಗಿ ಕೆಲಸ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಅವರ ಮೇಲೆ ನಡೆಸಿರುವ ದಾಳಿಯನ್ನು ಕೇವಲ ಒಬ್ಬ ರಾಜಕಾರಣಿಯ ಮೇಲಿನ ದಾಳಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಜನಪರ ಚಿಂತನೆ ಹೊಂದಿರುವವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂಬ ಸಂದೇಶವನ್ನು ಜನರಿಗೆ ನೀಡುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೆಹರೂ ಚಿಂತನಾ ವೇದಿಕೆಯ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಕಾರ್ಯದರ್ಶಿ ಅನ್ಸರುದ್ದಿನ್ ಸಾಲ್ಮರ, ಪ್ರಮುಖ ಸದಸ್ಯರಾದ ಕೆ.ಎಸ್.ಸತೀಶ್ ಕುಮಾರ್ ಹಾಗೂ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.

