ಬಂಟ್ವಾಳ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ ಮತ್ತು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಕುಕ್ಕಾಜೆ ಇವರ ಜಂಟಿ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಕ್ರೀಡಾಕೂಟವು ಸೆಪ್ಟೆಂಬರ್ ದಿನಾಂಕ 21ರಂದು ಮಂಚಿ ಕೊಳ್ನಾಡು ಪ್ರೌಢಶಾಲಾವರಣದ ನೂಜಿಬೈಲು ಅನುದಾನಿತ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು.
ದೀಪ ಬೆಳಗಿ ಉದ್ಘಾಟಿಸಿದ ಮಂಚಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಶ್ ಶುಭ ಹಾರೈಸಿದರು. ಕೊಳ್ನಾಡು ಸರಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ ರಾವ್ ಮಂಚಿ ಮಾತನಾಡಿ, ಕ್ರೀಡಾ ಪ್ರತಿಭೆಗಳು ಗ್ರಾಮದಿಂದ ಅರಳಿ ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು. ಕ್ರೀಡಾ ಸ್ಪೂರ್ತಿಯನ್ನು ಹೊಂದಿಕೊಂಡು ಸತತ ಅಭ್ಯಾಸ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಿ ದೇಶಕ್ಕೆ ಕೊಡುಗೆಯಾಗಬೇಕು ಎಂದರು

ಸಭಾಧ್ಯಕ್ಷ ಸ್ಥಾನದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರು ಸುಭೋದ್ ಭಂಡಾರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಾಗುವುದಕ್ಕಿಂತಲೂ ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ವಿಶೇಷ ಕೌಶಲ್ಯ ಹಾಗೂ ತರಬೇತು ಪಡೆಯುವುದರ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಕನಸು ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ತುಂಬಬೇಕಿದೆ ಎಂದರು.
ಉದ್ಘಾಟನಾ ಸಭಾ ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಜಿಲ್ಲಾಧ್ಯಕ್ಷರು ಶಿವಪ್ರಸಾದ್ ಶೆಟ್ಟಿ, ಮಂಚಿ ವಲಯದ ಸಂಪನ್ಮೂಲ ವ್ಯಕ್ತಿ ರಮೇಶ್, ಮಂಚಿ – ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ, ನಿವೃತ್ತ ಮುಖ್ಯ ಶಿಕ್ಷಕ ಗೋಪಾಲ್, ವಲಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಇಂದಿರಾ, ನೂಜಿಬೈಲು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ, ಪ್ರಗತಿ ಶಾಲೆಯ ಮುಖ್ಯಸ್ಥರು ಶ್ರೀಮತಿ ಶೋಭಿತಾ ಎಸ್ ಭಂಡಾರಿ ಉಪಸ್ಥಿತರಿದ್ದರು.
ಮಂಚಿ ವಲಯದ 37 ಶಾಲೆಗಳಿಂದ ಸುಮಾರು 550ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದರು.17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಮಂಚಿ – ಕೊಳ್ನಾಡು ಪ್ರೌಢಶಾಲೆ ಪಡೆದುಕೊಂಡಿತು.14ರ ವಯೋಮಾನದ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಫಜೀರು ಆವೇ ಮರಿಯ ಶಾಲೆ ಪಡೆದುಕೊಂಡಿತು.14ರ ವಯೋಮಾನದ ಬಾಲಕರ ಸಮಗ್ರ ಪ್ರಶಸ್ತಿಯನ್ನು ಸಜಿಪ ಮೂಡ ಶಾಲೆ ಪಡೆದುಕೊಂಡಿತು. ಈ ಎಲ್ಲ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಾಲತಿ, ಶಾಲಾ ಪಠ್ಯದ ಜೊತೆ ಕ್ರೀಡೆಯನ್ನು ಸಹಪಠ್ಯವಾಗಿ ನಮ್ಮ ಸರಕಾರ ಪ್ರೋತ್ಸಾಹಿಸುತ್ತಾ ಬಂದಿದೆ. ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯವನ್ನು ರೂಪಿಸುತ್ತಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಬಂಟ್ವಾಳ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ, ಶಿಕ್ಷಣ ಸಂಯೋಜಕ ರಮಾನಂದ ನೂಜಿಪ್ಪಾಡಿ, ನೋಡಲ್ ದೈಹಿಕ ಶಿಕ್ಷಣ ಶಿಕ್ಷಕರಾದ ಸಾಲೆತ್ತೂರು ಪ್ರೌಢಶಾಲೆಯ ರಾಘವೇಂದ್ರ ಮತ್ತು ನಾರ್ಶ ಪ್ರೌಢಶಾಲೆಯ ರಫೀಕ್ ಉಪಸ್ಥಿತರಿದ್ದರು
ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ನಯನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

