ಪುತ್ತೂರು: ಸಂಪ್ಯದಲ್ಲಿ 2019ರಲ್ಲಿ ನಡೆದ ಕಾರ್ತಿಕ್ ಮೆರ್ಲ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿರುವ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹3 ಲಕ್ಷ ದಂಡ ವಿಧಿಸಿದೆ.
2019ರ ಸೆಪ್ಟೆಂಬರ್ 3ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪ್ಯದಲ್ಲಿ ಕಾರ್ತಿಕ್ ಮೆರ್ಲ ಎಂಬ ಯುವಕನ ಕೊಲೆ ನಡೆದಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಪ್ರೀತು ಅಲಿಯಾಸ್ ಪ್ರೀತೇಶ್ ಸುಳ್ಯ ಹಾಗೂ ಚರಣ್, ಕಿರಣ್ ಅಲಿಯಾಸ್ ಮಣಿ ಮತ್ತು ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯ್ಕ್ ಅವರು ಪ್ರೀತು ಅಲಿಯಾಸ್ ಪ್ರೀತೇಶ್ ಸುಳ್ಯ ಹಾಗೂ ಕಿರಣ್ ಅಲಿಯಾಸ್ ಮಣಿ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಇಬ್ಬರಿಗೂ ಐಪಿಸಿ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಲಾಗಿದೆ. ಐಪಿಸಿ 341ರ ಅಡಿಯಲ್ಲಿ ಮೂರು ತಿಂಗಳ ಶಿಕ್ಷೆ ಹಾಗೂ ₹500 ದಂಡ ವಿಧಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ. ಮತ್ತೊಬ್ಬ ಆರೋಪಿ ಚರಣ್ ಈಗಾಗಲೇ ಮೃತಪಟ್ಟಿದ್ದಾನೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಜಯಂತಿ ಕೆ. ಅವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.

