ಮಂಗಳೂರು : ಮಂಗಳೂರು ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದು, 17 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಸೆ.22ರಂದು ನಡೆದಿದೆ.
ಕಂಕನಾಡಿ ನಗರ ಠಾಣೆಯ ಪೊಲೀಸರು ಬೆಳಗಿನ ಜಾವ ಮಾರ್ನಿಂಗ್ ರೌಂಡ್ಸ್ನಲ್ಲಿದ್ದ ವೇಳೆ, ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ವಾಹನಕ್ಕಾಗಿ ಕಾದು ನಿಂತಿದ್ದಾಗ, ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ EICHER ಲಾರಿಯನ್ನು ಪಡೀಲ್ ಟೊಯೋಟಾ ಕಾರು ಶೋರೂಮ್ ಎದುರು ತಡೆದು ಪರಿಶೀಲನೆ ನಡೆಸಿದರು.
ಲಾರಿಯಲ್ಲಿ ಹಸಿರು ಬಣ್ಣದ ಟಾರ್ಪಲ್ನಿಂದ ಬಾಡಿಯನ್ನು ಮುಚ್ಚಲಾಗಿದ್ದು, ಒಳಗೆ 17 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಹಗ್ಗಗಳಿಂದ ಬಿಗಿಯಾಗಿ ಕಟ್ಟಿ, ಒಂದರ ಮೇಲೊಂದರಂತೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕ ಹಾಸನ ಜಿಲ್ಲೆಯ ಸಾಧಿಕ್ ಜಿ. (23) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆಯ ವೇಳೆ ಮತ್ತೊಬ್ಬ ವ್ಯಕ್ತಿ ಲಾರಿಯಿಂದ ಇಳಿದು ಪರಾರಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜಾನುವಾರುಗಳು, ಲಾರಿ ಹಾಗೂ ಆರೋಪಿ ಸಾಧಿಕ್ನ ಮೊಬೈಲ್ ಫೋನ್ ಸೇರಿದಂತೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪರಾರಿಯಾಗಿರುವ ಸುಬಾನ್ ಮತ್ತು ರೆಹಮಾನ್ ಎಂಬ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

