ದುಬೈ, : ಉದ್ಯೋಗ ಅರಸಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ತೆರಳಿ ಎರಡು ದಶಕಗಳಿಂದ ಅಲ್ಲಿಯೇ ನೆಲೆಸಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಶಾರ್ಜಾದಲ್ಲಿ ಅತ್ಯಂತ ಬರ್ಬರವಾಗಿ ಹತ್ಯೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದ್ದು, ಅವರ ಮೃತದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಅಡಗಿಸಿಟ್ಟಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಪ್ರಕಾಶ್ ಕುಂದರ್ ಅವರು ಶಾರ್ಜಾ ಏರ್ಪೋರ್ಟ್ಗೆ ಸಂಬಂಧಿಸಿದ ಏಜೆನ್ಸಿಯೊಂದರಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಸುಮಾರು ಮೂರು ತಿಂಗಳ ಹಿಂದೆ ನಡೆದಿರುವ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣದ ತನಿಖೆಯನ್ನು ಶಾರ್ಜಾ ಪೊಲೀಸರು ನಡೆಸುತ್ತಿದ್ದಾರೆ.

ಪ್ರಕಾಶ್ ಅವರ ಸಹೋದರನಿಗೆ ಘಟನೆ ಕುರಿತು ಮೊದಲ ಅನುಮಾನ ಮೂಡಿದ್ದು, ಅವರೊಂದಿಗಿನ ಸಂವಹನದಲ್ಲಿನ ಬದಲಾವಣೆಯಿಂದ. ಸಹೋದರ ವಾಯ್ಸ್ ಮೆಸೇಜ್ ಕಳುಹಿಸಿದಾಗ, ಎಂದಿನಂತೆ ವಾಯ್ಸ್ ಮೆಸೇಜ್ ಮೂಲಕ ಉತ್ತರ ಬರುವ ಬದಲು ಟೆಕ್ಸ್ಟ್ ಮೆಸೇಜ್ (ಪಠ್ಯ ಸಂದೇಶ) ಬಂದಿತ್ತು. ಇದರಿಂದ ಅನುಮಾನಗೊಂಡ ಅವರು ಪ್ರಕಾಶ್ ಕೆಲಸ ಮಾಡುತ್ತಿದ್ದ ಏರ್ಪೋರ್ಟ್ ಏಜೆನ್ಸಿಗೆ ಸಂಪರ್ಕಿಸಿ ವಿಚಾರಿಸಿದ್ದಾರೆ. ಈ ವೇಳೆ ಪ್ರಕಾಶ್ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿಸಲಾಗಿತ್ತು.
ಆದರೆ, ಪ್ರಕಾಶ್ ಭಾರತಕ್ಕೆ ಬಂದಿರುವ ಯಾವುದೇ ಮಾಹಿತಿ ಕುಟುಂಬಸ್ಥರಿಗೆ ಲಭ್ಯವಾಗಿರಲಿಲ್ಲ. ಇದರಿಂದ ಮತ್ತಷ್ಟು ಅನುಮಾನಗೊಂಡ ಸಂಬಂಧಿಕರು ಶಾರ್ಜಾದಲ್ಲಿದ್ದ ಪರಿಚಿತರ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಪ್ರಕಾಶ್ ಅವರದೇ ಕಾರಿನ ಡಿಕ್ಕಿಯಲ್ಲಿ ಗುರುತು ಪತ್ತೆಯಾಗದಂತೆ ಒಂಬತ್ತು ತುಂಡುಗಳಾಗಿ ಕತ್ತರಿಸಲಾಗಿದ್ದ ಮೃತದೇಹ ಪತ್ತೆಯಾಗಿದೆ.
ನಂತರ ಕುಟುಂಬಸ್ಥರಿಂದ ಡಿಎನ್ಎ ಮಾದರಿಗಳನ್ನು ಪಡೆದು ಪರೀಕ್ಷೆ ನಡೆಸಿದಾಗ, ಪತ್ತೆಯಾದ ಮೃತದೇಹ ಪ್ರಕಾಶ್ ಕುಂದರ್ ಅವರದ್ದೇ ಎಂಬುದು ದೃಢಪಟ್ಟಿದೆ.
ಈ ನಡುವೆ ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ತಂದಿರುವ ಸಂಗತಿಯೆಂದರೆ ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ಘಟನೆ ಬಳಿಕ ನಾಪತ್ತೆಯಾಗಿರುವುದು. ಜುಲೈ ಅಂತ್ಯದಿಂದ ಶಾರ್ಜಾ ಪೊಲೀಸರು ಪ್ರಕರಣದ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪತ್ನಿ ಟೀನಾ ಕುಂದರ್ ಅವರು ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಕೃತ್ಯ ಎಸಗಿರುವ ಸಾಧ್ಯತೆಯ ಕುರಿತು ತನಿಖಾ ತಂಡಕ್ಕೆ ಶಂಕೆ ಇರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ, ಕೊಲೆಯ ಹಿಂದಿನ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಬಳಿಕ ಪತ್ನಿ ಮತ್ತು ಪುತ್ರ ಎಲ್ಲಿಗೆ ತೆರಳಿದ್ದಾರೆ ಎಂಬುದೂ ಪತ್ತೆಯಾಗಬೇಕಿದೆ.
ಪ್ರಕಾಶ್ ಅವರ ಕುಟುಂಬಸ್ಥರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಕೊಲೆಯ ಹಿಂದಿರುವ ನಿಜವಾದ ಕಾರಣ ಹಾಗೂ ಆರೋಪಿಗಳನ್ನು ಪತ್ತೆಹಚ್ಚುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ನಾಪತ್ತೆಯಾಗಿರುವ ಪತ್ನಿ ಹಾಗೂ ಪುತ್ರನ ಕುರಿತು ಶೀಘ್ರ ಮಾಹಿತಿ ಸಂಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆ ಶಾರ್ಜಾ ಪೊಲೀಸರ ಮುಂದುವರಿದಿದ್ದು, ಪ್ರಕಾಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ. ಮೃತದೇಹ ಸ್ವದೇಶಕ್ಕೆ ಬಂದ ಬಳಿಕ ಭಾರತ ಸರ್ಕಾರದ ಮೂಲಕವೂ ಪ್ರಕರಣದ ಸಮಗ್ರ ತನಿಖೆಗೆ ಮನವಿ ಸಲ್ಲಿಸಲು ಕುಟುಂಬಸ್ಥರು ಮುಂದಾಗಿದ್ದಾರೆ

