ಮಂಗಳೂರು: ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ಶೈಕ್ಷಣಿಕ ನೆರವು ದೊರಕಿಸಿಕೊಡುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ‘ಸ್ಕಾಲರ್ಶಿಪ್ ಮಾಸ್ಟರ್’ ನಾರಾಯಣ್ ನಾಯಕ್ ಅವರನ್ನು 2026ನೇ ಸಾಲಿನ 12ನೇ ಮೂಲತ್ವ ವಿಶ್ವಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26ರಂದು ಬೆಳಗ್ಗೆ 10 ಗಂಟೆಗೆ ಬಲ್ಮಠದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಫಲಕದೊಂದಿಗೆ ₹1,00,001 ನಗದು ಬಹುಮಾನ ನೀಡಲಾಗುವುದು ಎಂದರು.
ಮೂಲತ್ವ ಫೌಂಡೇಶನ್ ಕಳೆದ ಸುಮಾರು 20 ವರ್ಷಗಳಿಂದ ಶೈಕ್ಷಣಿಕ, ವೈದ್ಯಕೀಯ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ನಿಸ್ವಾರ್ಥ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಮೂಲತ್ವ ವಿಶ್ವಪ್ರಶಸ್ತಿ ನೀಡುತ್ತಿದೆ. ಈ ಹಿಂದೆ ಹರೇಕಳ ಹಾಜಬ್ಬ, ಸುಭಾಷಿನಿ ಮಿಸ್ತ್ರಿ, ಸಿಂಧುತಾಯಿ ಸಪ್ಕಾಲ್, ರವಿ ಕಟಪಾಡಿ, ಸುಕ್ರಿ ಬೊಮ್ಮಗೌಡ, ಸುನಿತಾ ಕೃಷ್ಣನ್, ಫುಲ್ಸನ್ಬಾಯಿ ಯಾದವ್, ಈಶ್ವರ್ ಮಲ್ಪೆ ಹಾಗೂ ನೆಲೆ ಫೌಂಡೇಶನ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಡಾ.ಜಗದೀಶ್ ಬಾಳ ಮಾತನಾಡಿ, ನಾರಾಯಣ್ ನಾಯಕ್ ಅವರು ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆಯನ್ನು ತಿಳಿದುಕೊಂಡು ವಿವಿಧ ಸರ್ಕಾರಿ ಹಾಗೂ ಸಂಘ-ಸಂಸ್ಥೆಗಳ ಸ್ಕಾಲರ್ಶಿಪ್ ದೊರಕಿಸಲು ವೈಯಕ್ತಿಕವಾಗಿ ಶ್ರಮಿಸುತ್ತಿದ್ದಾರೆ. ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅರ್ಜಿ ಸಲ್ಲಿಸುವವರೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಆಯ್ಕೆ ಸಮಿತಿಯ ಸದಸ್ಯೆ ಆರ್.ಜೆ. ನಯನ ಶೆಟ್ಟಿ ಮಾತನಾಡಿ, ಸ್ಕಾಲರ್ಶಿಪ್ಗಳ ಮಾಹಿತಿ ವಿದ್ಯಾರ್ಥಿಗಳಿಗೆ ತಲುಪಿಸುವುದರ ಜತೆಗೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೆರವಾಗುತ್ತಿರುವ ನಾರಾಯಣ್ ನಾಯಕ್ ಅವರ ಸೇವೆ ಗಮನಾರ್ಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಮೂಲತ್ವ, ಅಕ್ಷತ ಹಾಗೂ ಪ್ರೊ.ರಾಜ್ ಮೋಹನ್ ರಾವ್ ಉಪಸ್ಥಿತರಿದ್ದರು.

