ಮಂಗಳೂರು: ಕುಟುಂಬ ವೈದ್ಯರ ಸಂಘದ ವತಿಯಿಂದ ದಿವಂಗತ ಡಾ.ಸುರೇಶ್ ಸುರತ್ಕಲ್ ಅವರ ಸಂಸ್ಮರಣಾ ದಿನಾಚರಣೆಯನ್ನು ಅಕ್ಟೋಬರ್ 29ರಂದು ಸಂಜೆ 7 ಗಂಟೆಗೆ ನಗರದ ಓಷನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಖಜಾಂಚಿ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಸುರೇಶ್ ಅವರು ಸುಮಾರು 47 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದು, ಬಡವರು, ದೀನದಲಿತರು ಹಾಗೂ ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಮಂಗಳೂರಿನ ಒಮೇಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿ ಕೊನೆಯ ದಿನದವರೆಗೂ ಸೇವೆ ಸಲ್ಲಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಹಾಗೂ ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷ, ಹಿರಿಯ ಕೀಲು ತಜ್ಞ ಡಾ.ಶಾಂತರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎರಡು ಬಾರಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಚಂದ್ರ ಅವರಿಂದ ಸುಗಮ ಸಂಗೀತ ಹಾಗೂ ಶಿವಾನಿ ಮತ್ತು ಸುರತ್ಕಲ್ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಡಾ.ಸುರೇಶ್ ಅವರ ಪುತ್ರ ತುಷಾರ್ ಸುರೇಶ್ ಸುರತ್ಕಲ್ ಮಾತನಾಡಿ, ಕೋವಿಡ್ ಅವಧಿಯಲ್ಲಿಯೂ ತಂದೆಯವರು ಹಗಲು-ರಾತ್ರಿ ಎನ್ನದೆ ರೋಗಿಗಳಿಗೆ ಚಿಕಿತ್ಸೆ ನೀಡಿ ಧೈರ್ಯ ತುಂಬಿದ್ದರು. ಅವರ ಸೇವಾ ಮನೋಭಾವವನ್ನು ಸ್ಮರಿಸುವುದರ ಜೊತೆಗೆ ಕುಟುಂಬ ವೈದ್ಯರ ಸಂಘದ ಬೆಳವಣಿಗೆಗೆ ಸಹಕಾರ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಜಿ.ಕೆ. ಭಟ್, ಡಾ. ಮುಕುಂದ್, ಭಾರದ್ವಾಜ್ ಉಪಸ್ಥಿತರಿದ್ದರು.

