ಮಂಗಳೂರು: ಕನರಾ ಇಂಜಿನಿಯರಿಂಗ್ ಕಾಲೇಜಿನ ‘ಮಾದಕ ವಸ್ತು ವಿರೋಧಿ ಘಟಕ’ (Anti Drug Cell) ಮತ್ತು ‘Ragging ರ್ಯಾಗಿಂಗ್ ವಿರೋಧಿ ಘಟಕ’ (Anti Ragging Cell) ವತಿಯಿಂದ’ವಿದ್ಯಾರ್ಥಿ ಪರಿಚಯ ಕಾರ್ಯಕ್ರಮ ಅಂಗವಾಗಿ ಬಿ.ಇ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕಿ ಶ್ರೀಮತಿ ಹರಿಣಿ ಕುಮಾರಿ ಡಿ. ಉದ್ಘಾಟಿಸಿದರು. ಕನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ. ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಂಟ್ವಾಳ ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಂಗೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಂಟ್ವಾಳದ ನ್ಯಾಯವಾದಿ ಅಬ್ದುಲ್ ಜಲೀಲ್ ಎನ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಕಾನೂನು ಹಕ್ಕುಗಳು ಮತ್ತು ಜವಾಬ್ದಾರಿಗಳು, ಮಾದಕ ವಸ್ತು ನಿಯಂತ್ರಣ ಕಾನೂನುಗಳು, ರಸ್ತೆ ಸುರಕ್ಷತೆ ಮತ್ತು ಮೋಟಾರು ವಾಹನ ಕಾಯ್ದೆ, ಸೈಬರ್ ಕಾನೂನುಗಳು ಹಾಗೂ ಆನ್ಲೈನ್ ಸುರಕ್ಷತೆ, ಮತ್ತು ರ್ಯಾಗಿಂಗ್ ವಿರೋಧಿ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಕಾನೂನುಬದ್ಧ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವುದು, ಜವಾಬ್ದಾರಿಯುತ ಡಿಜಿಟಲ್ ನಡವಳಿಕೆ, ನೈತಿಕ ವರ್ತನೆ ಮತ್ತು ಕಾನೂನಿಗೆ ಗೌರವ ನೀಡುವುದರ ಮಹತ್ವ, ಕಾನೂನುಬಾಹಿರ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

