ದುಬೈ: ಯುಎಇ ಬಂಟ್ಸ್ ಸಂಘಟನೆಯ ವತಿಯಿಂದ ಆಯೋಜಿಸಲಾದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ಅಕ್ಟೋಬರ್ 25ರಂದು ದುಬೈಯ ಜೆ.ಎಸ್.ಎಸ್. ಇಂಟರ್ನ್ಯಾಷನಲ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ಭಕ್ತಿಭಾವದಿಂದ ನೆರವೇರಿತು. ಯುಎಇಯ ಏಳು ಎಮಿರೇಟ್ಸ್ಗಳ ಬಂಟ ಬಾಂಧವರು ಹಾಗೂ ವಿವಿಧ ತುಳು-ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.


ಶ್ರೀ ರಘು ಭಟ್ ಮತ್ತು ಶ್ರೀ ಸಂತೋಷ್ ಭಟ್ ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ಯುಎಇ ಬಂಟ್ಸ್ನ ಸುಮಂಗಲೆಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಕ್ತರ ಪರವಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಆರತಿ ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ ಮತ್ತು ಸಂಗೀತ ಸತೀಶ್ ಶೆಟ್ಟಿ ಕುಳಿತು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು.


ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು. ವಿಧೂಷಿ ಸ್ವಪ್ನ ಕಿರಣ್ ಮತ್ತು ವಿಧೂಷಿ ರೂಪ ಕಿರಣ್ ಅವರ ನಿರ್ದೇಶನದಲ್ಲಿ ಯುಎಇ ಬಂಟ್ಸ್ನ ಮಕ್ಕಳು ಪ್ರಸ್ತುತಪಡಿಸಿದ ನೃತ್ಯ ಭಜನೆ ನೆರೆದಿದ್ದವರ ಗಮನ ಸೆಳೆಯಿತು.


ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆಯ ಬಳಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪೋಷಕರನ್ನು ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷ ಪ್ರೇಮ್ನಾಥ್ ಶೆಟ್ಟಿ ಮತ್ತು ಕಾರ್ಯದರ್ಶಿ ರವಿರಾಜ್ ಶೆಟ್ಟಿ ಅವರು ಶಾಲು ಹೊದಿಸಿ, ವಿಶೇಷ ಪ್ರಸಾದ ನೀಡಿ ಗೌರವಿಸಿದರು.


ಚಿತ್ರ ಪ್ರಸನ್ನ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪೂಜೆಯ ಸಮಾರೋಪದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.


ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕೋರ್ ಕಮಿಟಿ ಸದಸ್ಯರು, 2025–26ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರು ಹಾಗೂ ಸಂಘದ ಕಾರ್ಯಕರ್ತರಿಗೆ ಯುಎಇ ಬಂಟ್ಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಕೃತಜ್ಞತೆ ಸಲ್ಲಿಸಿದರು.


ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ

