ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ ಸಮಾರಂಭವು ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಹಾಲ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಮಾಜವನ್ನು ಪ್ರವರ್ಗ 2ಎಗೆ ಅಧಿಕೃತವಾಗಿ ಸೇರಿಸಿ, ಅರ್ಹರಿಗೆ ಜಾತಿ ಪ್ರಮಾಣಪತ್ರ ನೀಡುವ ಕುರಿತು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕೆಂದು ಸಮಾರಂಭದಲ್ಲಿ ಒತ್ತಾಯಿಸಲಾಯಿತು.
ಸಮಾಜದ ಪ್ರಧಾನ ಕಾರ್ಯದರ್ಶಿ ಎ. ಶಶಿಕುಮಾರ್ ಮರುತ್ತುವರ್ ಮಾತನಾಡಿ, ಜಾತಿ ಪ್ರಮಾಣಪತ್ರ ದೊರೆಯದ ಕಾರಣ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಶಿಫಾರಸು ಮಾಡಿದ್ದು, ಸರ್ಕಾರ ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ.ಸುವರ್ಣ ಹಾಗೂ ವಕೀಲ ಮಹಮ್ಮದ್ ಅಸ್ಗರ್ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಮರುತ್ತುವರ್ ಸಮಾಜದ ಅಧ್ಯಕ್ಷ ಪಿ.ಕುಮಾರ್ ಸಾಲತ್ತೂರು, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಎಸ್. ರವಿ ಬೆಳ್ತಂಗಡಿ ಸೇರಿದಂತೆ ವಿವಿಧ ರಾಜ್ಯಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ದಶಮಾನೋತ್ಸವದ ಅಂಗವಾಗಿ ಸಮಾಜ ಸೇವಕರು, ಹಿರಿಯ ಕ್ಷೌರಿಕ ವೃತ್ತಿದಾರರು ಹಾಗೂ ಶೈಕ್ಷಣಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ನೂರಾರು ಸದಸ್ಯರು ಭಾಗವಹಿಸಿದ್ದರು.

