ಮಂಗಳೂರು: ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅಡುಗೆ ಅನಿಲ ಬಳಕೆಯ ದಕ್ಷತೆ, ಸುರಕ್ಷತೆ ಮತ್ತು ವೆಚ್ಚ ಕಡಿತಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪುಣೆ ಗ್ಯಾಸ್ ಸಂಸ್ಥೆಯು ಮಂಗಳೂರಿನಲ್ಲಿ ತನ್ನ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ ಆರಂಭಿಸಿದೆ.
ಮಂಗಳೂರು ಉರ್ವ ಮಾರಿಗುಡಿ ಸಮೀಪದ ಲೋಟಸ್ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ ವಿಂದ್ಯಾ ಅಪ್ಲಯನ್ಸಸ್ನಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಇದು ಸಂಸ್ಥೆಯ ಹತ್ತನೇ ಅನುಭವ ಕೇಂದ್ರವಾಗಿದ್ದು, ಕರ್ನಾಟಕದಲ್ಲಿ ಎರಡನೇ ಕೇಂದ್ರವಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸಂಸ್ಥೆಯ ಎಕ್ಸ್ಪೀರಿಯನ್ಸ್ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು.
ಪುಣೆ ಗ್ಯಾಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಸಿಇಒ ಜೇಸಲ್ ಸಂಪತ್ ಅವರು ನೂತನ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಫ್ರಾಂಚೈಸಿ ಪಾಲುದಾರ ಸಂಸ್ಥೆಯಾದ ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಹಾಗೂ ಮಂಗಳೂರಿನ ಹೋಟೆಲ್ ಉದ್ಯಮದ ಪ್ರಮುಖರು ಉಪಸ್ಥಿತರಿದ್ದರು.
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಆತಿಥ್ಯ, ಮತ್ಸ್ಯೋದ್ಯಮ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಈ ಕ್ಷೇತ್ರಗಳಲ್ಲಿ ಅನಿಲದ ಬಳಕೆ ಹೆಚ್ಚಿರುವುದರಿಂದ ಉದ್ಯಮಗಳ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಸುರಕ್ಷತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುವ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸಲು ಸಂಸ್ಥೆ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜೇಸಲ್ ಸಂಪತ್, ಅನಿಲ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಉದ್ಯಮಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಗಣನೀಯ ಉಳಿತಾಯ ಸಾಧಿಸಬಹುದು. ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅನಿಲ ಆಧಾರಿತ ಉದ್ಯಮಗಳಿಗೆ ಉತ್ತಮ ಅವಕಾಶಗಳಿವೆ. ಪುಣೆ ಗ್ಯಾಸ್ನ ಎಂಜಿನಿಯರಿಂಗ್ ಪರಿಹಾರಗಳು ದೇಶಾದ್ಯಂತದ ಉದ್ಯಮಗಳಿಗೆ ವಾರ್ಷಿಕವಾಗಿ 1,400 ಕೋಟಿ ರೂ.ಗೂ ಅಧಿಕ ಉಳಿತಾಯ ಮಾಡಲು ನೆರವಾಗಿವೆ. ಮಂಗಳೂರಿನ ಹಲವು ಪ್ರಮುಖ ಉದ್ಯಮಗಳಿಗೆ ಈಗಾಗಲೇ ಸೇವೆ ಒದಗಿಸುತ್ತಿರುವ ಸಂಸ್ಥೆ, ತನ್ನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಈ ಅನುಭವ ಕೇಂದ್ರವನ್ನು ಆರಂಭಿಸಿದೆ ಎಂದು ತಿಳಿಸಿದರು.
ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಮಾತನಾಡಿ, ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 850 ಮೆಟ್ರಿಕ್ ಟನ್ ಎಲ್ಪಿಜಿಗೆ ಬೇಡಿಕೆಯಿದ್ದು, ಇದು ಸುಮಾರು 44,000 ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳಿಗೆ ಸಮಾನವಾಗಿದೆ. ಅನಿಲ ವಿತರಣೆ, ಸುರಕ್ಷತೆ ಮತ್ತು ಬಳಕೆಯ ದಕ್ಷತೆಯ ಕ್ಷೇತ್ರದಲ್ಲಿ ಇದರಿಂದ ವ್ಯಾಪಕ ಅವಕಾಶಗಳು ಸೃಷ್ಟಿಯಾಗಿವೆ. ಪುಣೆ ಗ್ಯಾಸ್ನ ಆಧುನಿಕ ವ್ಯವಸ್ಥೆಗಳು ಎಲ್ಪಿಜಿ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದರೊಂದಿಗೆ ಅನಿಲ ವ್ಯರ್ಥವಾಗುವುದನ್ನು ತಡೆಯಲು ಸಹಕಾರಿಯಾಗಿವೆ ಎಂದು ಹೇಳಿದರು.
ನೂತನ ಅನುಭವ ಕೇಂದ್ರದಲ್ಲಿ ಡ್ರೈ ಟೈಪ್ ಎಲ್ಪಿಜಿ ವೇಪರೈಸರ್, ಎಲ್ಪಿ ಜೀನಿಯಸ್ ಸ್ಮಾರ್ಟ್ ಎಲ್ಪಿಜಿ ಸಿಸ್ಟಮ್, ಫ್ಯೂಯೆಲ್ಫ್ಯೂಷನ್, ಲೀಕ್ ಚೆಕ್, ಹ್ಯಾಂಡ್ಹೆಲ್ಡ್ ಸ್ನಿಫರ್ ಹಾಗೂ ಗ್ಯಾಸ್ಟ್ರೈನ್ ಪ್ರೆಷರ್ ರೆಗ್ಯುಲೇಷನ್ ಸಿಸ್ಟಮ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಗ್ರಾಹಕರು ಈ ಉಪಕರಣಗಳನ್ನು ನೇರವಾಗಿ ವೀಕ್ಷಿಸಿ, ಅವುಗಳ ಕಾರ್ಯವೈಖರಿ ಮತ್ತು ಬಳಕೆಯ ಕುರಿತು ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

