ಮಂಗಳೂರು: ಮಾನ್ಯ ಆರೋಗ್ಯ ಸಚಿವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿ ಮೀನುಗಳ ಸಂರಕ್ಷಣೆಗೆ ಬಳಸುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಪರಿಶೀಲನಾ ಭೇಟಿ ನೀಡಿದರು.
ಮಂಗಳೂರಿನ ಬಂದರು ಧಕ್ಕೆಯಲ್ಲಿರುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿ ತಯಾರಿಸಲಾಗುವ ಮಂಜುಗಡ್ಡೆಯ ಮಾದರಿಗಳನ್ನು ಸಂಗ್ರಹಿಸಿದರು. ಘಟಕಗಳಲ್ಲಿ ನೀರಿನ ಟ್ಯಾಂಕರ್ಗಳ ಮೂಲಕ ಸಿಹಿನೀರನ್ನು ಖರೀದಿಸಿ ಮಂಜುಗಡ್ಡೆ ತಯಾರಿಸಲಾಗುತ್ತಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ.

ಮಂಜುಗಡ್ಡೆ ತಯಾರಿಕೆಗೆ ಬಳಸುವ ನೀರಿನ ಪ್ರಯೋಗಾಲಯ ವರದಿಗಳನ್ನು ಪಡೆದು, ಅದರ ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕವೇ ಉತ್ಪಾದನೆ ನಡೆಸುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ನಿರ್ವಹಿಸಲಾಗುತ್ತಿರುವ ಘಟಕದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಂಜುಗಡ್ಡೆ ತಯಾರಿಸಲಾಗುತ್ತಿರುವುದು ಕಂಡುಬಂದಿದೆ.
ಇದಲ್ಲದೆ, ಮಂಜುಗಡ್ಡೆ ತಯಾರಿಕೆಗೆ ಬಳಸುವ ನೀರಿನ ಆಹಾರ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
ಮೀನುಗಳ ಗುಣಮಟ್ಟ ಮತ್ತು ತಾಜಾತನವನ್ನು ಕಾಪಾಡಲು ಶುದ್ಧ ಹಾಗೂ ಉತ್ತಮ ಗುಣಮಟ್ಟದ ನೀರಿನಿಂದ ತಯಾರಿಸಿದ ಮಂಜುಗಡ್ಡೆಯನ್ನೇ ಬಳಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಘಟಕಗಳಿಗೆ ನಿರ್ದೇಶನ ನೀಡಿದ್ದಾರೆ.

