ಮಂಗಳೂರು: ನಗರದ ಶೈಕ್ಷಣಿಕ ಕ್ಷೇತ್ರದಲ್ಲಿ ಐದು ದಶಕಗಳಿಂದ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಬೆಸೆಂಟ್ ಸಂಧ್ಯಾ ಕಾಲೇಜು ತನ್ನ 50ನೇ ವರ್ಷದ ಸಂಭ್ರಮದಲ್ಲಿದೆ. ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭವು ನವೆಂಬರ್ 6ರಂದು ಶುಕ್ರವಾರ ಸಂಜೆ 5.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕಿ ಲಲಿತಾ ಜಿ.ಮಲ್ಯ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 1976ರಲ್ಲಿ ಸ್ಥಾಪನೆಯಾದ ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರಿನ ಪ್ರಮುಖ ಸಹಶಿಕ್ಷಣ ಸಂಜೆಯ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಉದ್ಯೋಗ, ವೃತ್ತಿ ಹಾಗೂ ಇತರ ಜವಾಬ್ದಾರಿಗಳೊಂದಿಗೆ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಾ, ಕಳೆದ ಐದು ದಶಕಗಳಲ್ಲಿ ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ ಹಾಗೂ ಶೈಕ್ಷಣಿಕ ಪ್ರಗಿಗೆ ಪೂರಕವಾದ ವಾತಾವರಣವನ್ನು ರೂಪಿಸಿದೆ.

ಐದು ದಶಕಗಳ ಸಾರ್ಥಕ ಸಾಧನೆ, ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳ ಯಶಸ್ಸನ್ನು ಸ್ಮರಿಸುವುದರೊಂದಿಗೆ, ಪ್ರಸ್ತುತ ಸಾಧನೆಗಳನ್ನು ಸಂಭ್ರಮಿಸಿ ಮುಂದಿನ ದಿನಗಳ ಹೊಸ ಆಶಯಗಳಿಗೆ ಮುನ್ನುಡಿ ಬರೆಯುವ ಉದ್ದೇಶದಿಂದ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜು ಆಡಳಿತ ಮಂಡಳಿ ಯೋಜನೆ ರೂಪಿಸಿದೆ.
ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್, ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಪ್ರವೀಣ್ ಪೂಜಾರಿ, ಶ್ರೀ ಶಬರಿ ಕ್ಯಾಟರರ್ಸ್ನ ಎಲ್.ಎನ್. ರಾಜೇಶ್ ಶೆಟ್ಟಿ ಶಬರಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗೌತಮ್ ಪೈ ಡಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ಯಾಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಪೈ, ಸಂಚಾಲಕಿ ಲಲಿತಾ ಜಿ.ಮಲ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಾಲ ರೆಡ್ಡಿ ರಿಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಐದು ದಶಕಗಳ ಶೈಕ್ಷಣಿಕ ಪರಂಪರೆಯನ್ನು ಸ್ಮರಿಸುವ ಈ ಮಹತ್ವದ ಸಂಭ್ರಮಕ್ಕೆ ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರು ಹಾಗೂ ಕಾಲೇಜಿನ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ನಾಯಕ್ , ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಪೈ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಾಲ ರೆಡ್ಡಿ ರಿಟ್ಟಿ,ದಿಗಂತ್ ಎಸ್.ಪಿ ಮೊದಲಾದವರು ಉಪಸ್ಥಿತರಿದ್ದರು

