ಮಂಗಳೂರು: ಕರಾವಳಿ ಕರ್ನಾಟಕದ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ, ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ 78 ವರ್ಷದ ವೃದ್ಧರೊಬ್ಬರಿಗೆ ಅತ್ಯಾಧುನಿಕ ಮೋಟರೈಸ್ಡ್ ಟ್ರಾನ್ಸ್ಕ್ಯಾಥೆಟರ್ ಏಓರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ (ಟಿಎವಿಐ) ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.
ಹೃದಯ ವೈಫಲ್ಯ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ವೇಳೆ ಹೃದಯದ ಮಹಾಪಧಮನಿಯ ಕವಾಟ ಸಂಪೂರ್ಣ ಹಾನಿಗೊಳಗಾಗಿರುವುದು ಪತ್ತೆಯಾಗಿತ್ತು. ಈ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೃದ್ಧರಿಗೆ ವಯಸ್ಸಿನ ಕಾರಣದಿಂದ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಿತ್ತು.
ಇಂತಹ ರೋಗಿಗಳಿಗೆ ಎದೆ ತೆರೆಯದೆ ಕ್ಯಾಥೆಟರ್ ಮೂಲಕ ಹೃದಯದ ಕವಾಟ ಬದಲಾಯಿಸುವ ಟಿಎವಿಐ ಚಿಕಿತ್ಸೆ ಪರಿಣಾಮಕಾರಿ ಆಯ್ಕೆಯಾಗಿದೆ. ಈ ಬಾರಿ ಕರಾವಳಿ ಕರ್ನಾಟಕದಲ್ಲೇ ಮೊದಲ ಬಾರಿಗೆ ಮೋಟರೈಸ್ಡ್ ತಂತ್ರಜ್ಞಾನ ಬಳಸಲಾಗಿದ್ದು, ಕವಾಟವನ್ನು ನಿಖರವಾದ ಸ್ಥಾನದಲ್ಲಿ ಇರಿಸಿದ ಬಳಿಕ ಸ್ವಿಚ್ ಮೂಲಕ ಸ್ವಯಂಚಾಲಿತವಾಗಿ ಅಳವಡಿಸಬಹುದಾಗಿದೆ. ಇದರಿಂದ ಮಾನವ ಹಸ್ತಕ್ಷೇಪ ಮತ್ತು ದೋಷಗಳ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇಂಡಿಯಾನಾ ಆಸ್ಪತ್ರೆಯು 2019ರಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಟಿಎವಿಐ ಚಿಕಿತ್ಸೆಯನ್ನು ಪರಿಚಯಿಸಿತ್ತು. ಕಳೆದ ಏಳು ವರ್ಷಗಳಲ್ಲಿ ಶೂನ್ಯ ಪ್ರಕ್ರಿಯಾತ್ಮಕ ಮರಣ ಪ್ರಮಾಣದೊಂದಿಗೆ ಚಿಕಿತ್ಸೆ ಮುಂದುವರಿಸಿರುವುದು ಗಮನಾರ್ಹ. ವಯೋವೃದ್ಧರು ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯ ಹೊಂದಿರುವ ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸೆಗಳು ಹೊಸ ಭರವಸೆ ನೀಡುತ್ತಿವೆ ಎಂದು ಡಾ.ಯೂಸುಫ್ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

